ಬೆಂಗಳೂರು: ಇಂದು ಮಧ್ಯಾಹ್ನ ದೇಶಾದ್ಯಂತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ನಡೆಯಲಿದೆ.
ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ತುಂಬು ತೋಳಿನ ಅಂಗಿ, ಶೂ ಧರಿಸುವಂತಿಲ್ಲ. ಯುವತಿಯರು ರಿಂಗ್, ಮೂಗುತಿ, ಚೈನ್ ಸೇರಿ ಯಾವುದೇ ಆಭರಣ ತೊಡುವಂತಿಲ್ಲ. ಇಂತಹ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದು, ಅಭ್ಯರ್ಥಿಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ನೀಟ್ ಪರೀಕ್ಷಾ ಪ್ರಕಟಣೆಯಲ್ಲಿ ತಿಳಿಸಿದೆ.
ಮಧ್ಯಾಹ್ನ 2 ಗಂಟೆಗೆ ದೇಶಾದ್ಯಂತ ಏಕಕಾಲದಲ್ಲಿ ನೀಟ್ ಪರೀಕ್ಷೆ ನಡೆಯಲಿದೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅಗತ್ಯವಿರುವ ರಾಷ್ಟ್ರೀಯ ಅರ್ಹತೆ ಪರೀಕ್ಷೆಗೆ 15.19 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ.
ಹಿಂದಿನ ವರ್ಷ ಈ ರೂಲ್ಸ್ ಗೊತ್ತಿಲ್ಲದೆ ಹೋದವರು ತಾಳಿ ತೆಗೆದು ಕಣ್ಣೀರು ಇಟ್ಟಿದ್ದ ಘಟನೆಗಳು ನಡೆದಿತ್ತು. ಜೊತೆಗೆ ಚಿನ್ನಾಭರಣಗಳನ್ನು ಕಳೆದುಕೊಂಡ ಘಟನೆಗಳು ನಡೆದಿತ್ತು. ಇದಕ್ಕಾಗಿ ಮುಂಚಿತವಾಗಿ ನೀಟ್ ಕಟ್ಟುನಿಟ್ಟಿನ ರೂಲ್ಸ್ ಬಗ್ಗೆ ಪ್ರಕಟಣೆ ಹೊರಡಿಸಿದೆ.
ಪರೀಕ್ಷಾ ಸಮಯ:
ಇಂದು ಮಧ್ಯಾಹ್ನ 1.15ಕ್ಕೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಇರಬೇಕು. ಆ ನಂತರ ಬಂದವರ ಪ್ರವೇಶ ರದ್ದಾಗಲಿದೆ. 1.30ರಿಂದ 1.45ರವರೆಗೆ ಪರೀಕ್ಷಾ ಬುಕ್ ಲೆಟ್ ನೀಡಲಾಗುತ್ತದೆ. ಹಾಗೆಯೇ 1.50ರ ಸುಮಾರಿಗೆ ಬುಕ್ ಲೆಟ್ ನಲ್ಲಿ ಅಗತ್ಯವಾಗಿ ಬರೆಯಬೇಕಾದ್ದನ್ನು ಬರೆಯಲು ಸೂಚನೆ ನೀಡಲಾಗುತ್ತದೆ. ಆ ಬಳಿಕ 2 ಗಂಟೆಯಿಂದ 5ರ ವರೆಗೆ ಪರೀಕ್ಷೆ ನಡೆಯಲಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ:
ಬೆಂಗಳೂರು, ಮಂಗಳೂರು, ಉಡುಪಿ, ಮೈಸೂರು, ಧಾರವಾಡ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ.