ರಾಯಚೂರು: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣ ಹಿನ್ನೆಲೆಯಲ್ಲಿ ಸಿಐಡಿ ವಶದಲ್ಲಿದ್ದ ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಳೆದ 9 ದಿನಗಳಿಂದ ಆರೋಪಿ ಸುದರ್ಶನ್ ಯಾದವ್‍ನನ್ನು ವಶದಲ್ಲಿಟ್ಟುಕೊಂಡು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಂದಿಗೆ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಆರೋಪಿಗೆ ಶೇವಿಂಗ್ ಮಾಡಿಸಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ವಿಚಾರಣೆ ನಡೆಸಿದ ರಾಯಚೂರು 3ನೇ ಜೆಎಂಎಫ್‍ಸಿ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯನ್ನು ಎರಡು ಬಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಮಹತ್ವದ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ.
ಮೃತ ವಿದ್ಯಾರ್ಥಿನಿ ಹಾಗೂ ಆರೋಪಿ ಓಡಾಡಿದ ಸ್ಥಳಗಳು, ವಿದ್ಯಾರ್ಥಿನಿ ಸಾವಿನ ಬಳಿಕ ಆರೋಪಿ ಓಡಾಡಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಂಧ್ರಪ್ರದೇಶದ ಮಂತ್ರಾಲಯ, ಆದೋನಿಯಲ್ಲಿನ 5 ಕಡೆಗಳಲ್ಲಿ ಸಿಐಡಿ ಪೊಲೀಸರು ಸಿಸಿಟಿವಿ ಫೂಟೇಜ್ ಸಂಗ್ರಹ ಮಾಡಿದ್ದಾರೆ. ಲಾಡ್ಜ್ ರಿಜಿಸ್ಟರ್‍ನಲ್ಲಿ ಹೆಸರು ನೋಂದಣಿ ಮಾಡಿರುವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಸುದರ್ಶನ್ ಮತ್ತು ವಿದ್ಯಾರ್ಥಿನಿ ಜೊತೆಯಾಗಿ ಹೊರ ಹೋಗಿರುವುದಕ್ಕೆ ಮಹತ್ವದ ಸಾಕ್ಷಾಧಾರಗಳ ಸಂಗ್ರಹ ಮಾಡಲಾಗಿದೆ. ಈ ಹಿಂದೆಯೂ ಕೂಡಾ ಇಬ್ಬರು ಜೊತೆಯಾಗಿ ಸುತ್ತಾಡುತ್ತಿದ್ದರು ಎನ್ನುವುದಕ್ಕೆ ಪೂರಕವಾಗಿ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.
ಸಿಐಡಿ ಡಿವೈಎಸ್‍ಪಿ ಕೆ. ರವಿಶಂಕರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಲಭ್ಯವಾದ ಸಾಕ್ಷಾಧಾರ ಆಧಾರದ ಮೇಲೆ ಆರೋಪಿ ವಿಚಾರಣೆ ಮಾಡಲಾಗಿದೆ. ಇದುವರೆಗೆ ಆರೋಪಿ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಈಗ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರಿಸಲಿದ್ದಾರೆ.