ಹಾಸನ: ಎಸ್‍ಎಸ್‍ಎಲ್‍ಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಹಾಸನ ಫಸ್ಟ್, ರಾಮನಗರ ಎರಡನೇ ಸ್ಥಾನ ಪಡೆದಿವೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ಇಂದು ದಕ್ಷಿಣ ಕನ್ನಡ ರಿಸಲ್ಟ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡದವರು ಬಿಜೆಪಿಗೆ ವೋಟು ಹಾಕಿದ್ದಕ್ಕೆ ಜಿಲ್ಲೆ ಫಲಿತಾಂಶದಲ್ಲಿ 5ನೇ ಸ್ಥಾನಕ್ಕೆ ಬಂದಿದೆ. ಜಾತ್ಯಾತೀತ ಜನತಾ ದಳಕ್ಕೆ ವೋಟ್ ಹಾಕುತ್ತಿದ್ದರೆ ಅದು ಮೊದಲನೇ ಸ್ಥಾನಕ್ಕೆ ಬರುತಿತ್ತು ಎಂದು ತಮಾಷೆಯಾಡಿದ್ದಾರೆ. ಅಲ್ಲದೆ ಅಲ್ಲಿ ಶಿಕ್ಷಣಕ್ಕೆ ಒತ್ತು ಕೊಡುವುದಿಲ್ಲ ಎನ್ನುವುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ ಎಂದು ಹೇಳಿದರು.
224 ವಿಧಾನಸಭಾ ಕ್ಷೇತ್ರದಲ್ಲೂ 1 ರಿಂದ ಪಿಯುಸಿವರೆಗೆ ಕನಿಷ್ಠ 10 ಇಂಗ್ಲಿಷ್ ಶಾಲೆಗಳನ್ನು ತೆರೆಯಬೇಕು ಎಂದು ಇದೇ ವೇಳೆ ಸರ್ಕಾರವನ್ನು ಒತ್ತಾಯಿಸಿದರು. ಹಳ್ಳಿಯ ಮಕ್ಕಳಿಗೆ ಶಿಕ್ಷಣ ಕೊಡಬೇಕಾಗಿದೆ. ಹೀಗಾಗಿ ಬೇರೆ ಇಲಾಖೆಗಳ ಅನುದಾನ ಕಡಿತಗೊಳಿಸಿ ಇಂಗ್ಲೀಷ್ ಶಾಲೆ ತೆರೆಯಲು ನೀಡಲಿ ಎಂದರು. ಇದನ್ನೂ ಓದಿ: ರೇವಣ್ಣಗೆ ಖಡಕ್ ಟಾಂಗ್ ಕೊಟ್ಟ ರೋಹಿಣಿ ಸಿಂಧೂರಿ
ಹಾಸನ ಜಿಲ್ಲೆಗೆ ದೈವಾನುಗ್ರಹವಿದೆ. ನಮ್ಮ ಜಿಲ್ಲೆ ಪ್ರಥಮ ಸ್ಥಾನ ಪಡೆಯಲು ದೇವೇಗೌಡರ ಕೊಡುಗೆಯೂ ಇದೆ. ಅವರು ಕೂಡ ಮಾರ್ಗದರ್ಶನ ನೀಡಿದ್ದಾರೆ. ಹೀಗಾಗಿ ಜಿಲ್ಲೆ ಶಿಕ್ಷಣದಲ್ಲಿ ಮೊದಲನೇ ಸ್ಥಾನಕ್ಕೆ ಬಂದಿದೆ. ಎರಡನೇ ಸ್ಥಾನ ರಾಮನಗರಕ್ಕೆ ಸಿಕ್ಕಿದೆ ಎಂದರು. ಇದನ್ನೂ ಓದಿ: SSLCಯಲ್ಲಿ ಹಾಸನಕ್ಕೆ ಉತ್ತಮ ಫಲಿತಾಂಶ ಬರಲು ಪತ್ನಿ ಭವಾನಿ ಕಾರಣ- ರೇವಣ್ಣ