ಒಂದು ಲಕ್ಷಕ್ಕೆ ಒಂದು ವೋಟ್ ಸೇಲ್!

Public TV
2 Min Read
klr vote

ಕೋಲಾರ: ಇದು ಲೋಕಸಭೆ ಎಲೆಕ್ಷನೂ ಇಲ್ಲ, ಅಸೆಂಬ್ಲಿ ಎಲೆಕ್ಷನೂ ಇಲ್ಲ. ನೂರು ಸಾವಿರ ರೂಪಾಯಿಗೆ ಇಲ್ಲಿ ಬೆಲೆನೇ ಇಲ್ಲ. ಏನಿದ್ದರೂ ಲಕ್ಷ ರೂಪಾಯಿಯದ್ದೇ ಹವಾ. ಅಂದಹಾಗೆ ಇದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರ ಹುದ್ದೆಗೆ ನಡೀತಿರುವ ಎಲೆಕ್ಷನ್‍ನ ಅಸಲಿಯತ್ತು.

ಮೇ 13ರಂದು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸಂಘದ ಚುನಾವಣೆ ನಡೆಯಲಿದೆ. ಎರಡೂ ಜಿಲ್ಲೆಯಿಂದ ಒಟ್ಟು 1,364 ಮತದಾರರಿದ್ದಾರೆ. ಇವರಿಗೆ ಈಗ ಹಬ್ಬವೋ ಹಬ್ಬ. ಸಂಘದ ಒಬ್ಬೊಬ್ಬ ಸದ್ಯಸ್ಯನಿಗೂ ಒಂದೊಂದು ವೋಟಿಗೆ ಕಮ್ಮಿ ಅಂದ್ರೂ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಆಮಿಷ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

KLR Vote 3

ಪ್ರತಿ ಹಾಲು ಉತ್ಪಾದಕರ ಸಂಘದ ಒಬ್ಬರಿಗೆ ಮತದಾನದ ಹಕ್ಕಿದ್ದು, ಮತದಾನಕ್ಕೂ ಮೊದಲು ಡೆಲಿಗೇಷನ್ ಫಾರಂ ಹಾಗೂ ಗುರುತಿನ ಚೀಟಿಯನ್ನು ಕಾರ್ಯದರ್ಶಿ ಮೂಲಕ ನೀಡಲಾಗುತ್ತದೆ. ಹಾಗಾಗಿ ಕಾರ್ಯದರ್ಶಿಗೆ ಒಂದು ವಾಚ್‍ನ್ನು ಗಿಫ್ಟ್ ಆಗಿ ಕೊಡಲಾಗುತ್ತೆ. ಅಧ್ಯಕ್ಷರಿಗೆ ಮತ ಒಂದಕ್ಕೆ ಒಂದು ಲಕ್ಷದಿಂದ ಒಂದೂವರೆ ಲಕ್ಷದವರೆಗೆ ನಿಗದಿ ಮಾಡಲಾಗಿದೆ. ಪರಿಣಾಮ ಅಧ್ಯಕ್ಷರುಗಳ ಡೆಲಿಗೇಷನ್ ಫಾರಂ ಹಾಗೂ ಗುರುತಿನ ಚೀಟಿಯನ್ನೇ ಕಳವು ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

KLR Vote 2

ಈಗಾಗಲೇ ಸುಮಾರು ಜನ ಅಧ್ಯಕ್ಷರುಗಳು ತಮ್ಮ ಗುರುತಿನ ಚೀಟಿ ಹಾಗೂ ಡೆಲಿಗೇಷನ್ ಫಾರಂ ಕಳೆದಿರುವ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇತರರಿಂದ ಹೆಚ್ಚಿನ ಆಮಿಷಗಳು ಬಂದಿರುವ ಸಾಧ್ಯತೆ ಇದ್ದು, ಅದನ್ನ ಮಾರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಜಿಲ್ಲೆಯ ಕೋಲಾರ ಹಾಗೂ ಮಾಲೂರು ತಾಲೂಕಿನ ನಿರ್ದೇಶಕರ ಸ್ಥಾನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಟಾಗಿದ್ದು, ಮಾಲೂರು ತಾಲ್ಲೂಕಿನ ಮಲಿಯಪ್ಪನಹಳ್ಳಿ, ಜಯಮಂಗಲ ಹಾಗೂ ಮಲಿಕನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರುಗಳು ತಮ್ಮ ಡೆಲಿಗೇಷನ್ ಫಾರಂ ಹಾಗೂ ತಮ್ಮ ಮತದಾರರ ಗುರುತಿನ ಚೀಟಿಯನ್ನು ಕಳೆದು ಕೊಂಡಿರುವ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

KLR Vote 1

ಮತದಾನ ಮಾಡಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಚುನಾವಣಾಧಿಕಾರಿಗೆ ಕೆಲವರು ಮನವಿ ಮಾಡಿದ್ದಾರೆ. ಅಲ್ಲದೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಗಳು ಗುರುತಿನ ಚೀಟಿಯನ್ನು ಕಳೆದಿರುವ ಬಗ್ಗೆ ಅಥವಾ ಅದನ್ನು ದುರುಪಯೋಗ ಪಡಿಸಿಕೊಂಡಿರುವ ಶಂಕೆ ಕೂಡಾ ವ್ಯಕ್ತವಾಗಿದೆ. ಆರೋಪಗಳು ಸಾಬೀತಾಗಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ಎಚ್ಚರಿಕೆಯನ್ನು ಚುನಾವಣಾಧಿಕಾರಿಗಳು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *