ಕೋಲ್ಕತ್ತಾ: ಲೋಕಸಭೆಯ ನಾಲ್ಕನೇ ಹಂತದ ಚುನಾವಣೆಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮತ್ತಷ್ಟು ಜೋರಾಗಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆಯಾಗಿದೆ. ಈ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಬಿದಿರಿನ ದೊಣ್ಣೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಆ ಕ್ಷೇತ್ರದ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಕಾರಿನ ಹಿಂಬದಿಯ ಗಾಜನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಡೆದು ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾಬುಲ್ ಸುಪ್ರಿಯೊ, ಕೇಂದ್ರದ ಭದ್ರತಾ ಪಡೆಯೊಂದಿಗೆ ಇದ್ದೇನೆ. ಮತ ಚಲಾಯಿಸಲು ಜನರನ್ನು ಮತಗಟ್ಟೆಯೊಳಗೆ ಬಿಡುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ನಾವು ಹೋರಾಟ ನಡೆಸುತ್ತಿದ್ದೇವೆ. ಅಸನ್ಸೋಲ್ ಕ್ಷೇತ್ರದ ಬೂತ್ ನಂಬರ್ 169, 113, 218, 20, 21, 22, 35 ಮತ್ತು 36ಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬೂತ್‍ನಲ್ಲಿ ಕಳೆದ ರಾತ್ರಿ ಕೇಂದ್ರ ಸೇನಾ ಪಡೆಯನ್ನು ಈ ಬೂತ್‍ನ ಭದ್ರತೆಗೆ ನಿಯೋಜಿಸಲಾಗಿತ್ತು. ಅದರೆ ಬೆಳಗ್ಗೆ ರಾಜ್ಯ ಪೊಲೀಸರು ಭದ್ರತೆಗೆ ಬಂದಿದ್ದನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ಎರಡು ಪಕ್ಷದ ಕಾರ್ಯಕರ್ತರ ನಡುವೆ ದೊಡ್ಡ ಘರ್ಷಣೆ ಉಂಟಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಘಟನೆ ಬಳಿಕ ಬಿಜೆಪಿ ಕಾರ್ಯಕರ್ತರು ಭದ್ರತಾ ಕಾರ್ಯಕ್ಕೆ ಕೇಂದ್ರ ಸೇನಾ ಪಡೆಗಳೇ ಬರಬೇಕು ಎಂದು ಒತ್ತಾಯಿಸಿ ಬೂತ್ ನಂಬರ್ 125 ಮತ್ತು 129 ರಲ್ಲಿ ಮತದಾನವನ್ನು ನಿಲ್ಲಿಸಿದರು. ಅದರೆ ಕೆಂದ್ರ ಸೇನಾಪಡೆಗಳು ಭದ್ರತೆಗೆ ಬಾರದೆ ಇದ್ದರೂ ಮತದಾನ ನಡೆಯಬೇಕು ಎಂದು ತೃಣಮೂಲ ಕಾಂಗ್ರೆಸ್‍ನ ಕಾರ್ಯಕರ್ತರು ಮತದಾನವನ್ನು ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಈ ಬೂತ್‍ಗಳಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಮತದಾನ ನಡೆಯುತ್ತಿದೆ.
https://www.youtube.com/watch?v=Tc8q7ImMXGk