ಜೈಪುರ: ಯುವಕನೊಬ್ಬ ಪತ್ನಿ ಕುಟುಂಬಸ್ಥರು ನೀಡಿದ 11 ಲಕ್ಷ ರೂ. ವರದಕ್ಷಿಣೆ ಹಣವನ್ನು ಹಿಂದಿರುಗಿಸಿ ಶಾಸ್ತ್ರಕ್ಕಾಗಿ ಕೇವಲ 1 ರೂ. ಮತ್ತು ಒಂದು ತೆಂಗಿನಕಾಯಿ ಪಡೆದುಕೊಳ್ಳುವ ಮೂಲಕ ಬಹುತೇಕರಿಗೆ ಮಾದರಿ ಆಗಿದ್ದಾನೆ.
ರಾಜಸ್ಥಾನದ ಹುನುಮಾನ್‍ಗಢದ ಭಾದರಾದಲ್ಲಿ ರಘುವೀರ್ ಮತ್ತು ಗೀತಾ ಎಂಬವರ ಮದುವೆ ನಡೆದಿತ್ತು. ಭಾದರಾದ ಮ್ಯಾರೇಜ್ ಗಾರ್ಡನ್ ನಲ್ಲಿ ಅದ್ಧೂರಿಯಾಗಿಯೇ ಮದುವೆ ನಡೆಯುತಿತ್ತು. ವರೋಪಚಾರ ಶಾಸ್ತ್ರದ ವೇಳೆ ವಧುವಿನ ಪೋಷಕರು ತಟ್ಟೆಯಲ್ಲಿ ಹೂ, ಹಣ್ಣಿನ ಜೊತೆಗೆ 11 ಲಕ್ಷ ರೂ. ನಗದು ನೀಡಿದ್ದಾರೆ. ಈ ವೇಳೆ ವರನ ಅಜ್ಜ ಶಾಸ್ತ್ರಕ್ಕಾಗಿ ಕೇವಲ 1 ರೂ. ಹಾಗೂ ಒಂದು ತೆಂಗಿನಕಾಯಿ ಪಡೆದು 11 ಲಕ್ಷ ಹಣ ಹಿಂದಿರುಗಿಸಿದ್ದಾರೆ. ಈ ದೃಶ್ಯವನ್ನು ನೋಡಿದ ಮದುವೆಗೆ ಆಗಮಿಸಿದ್ದ ಅತಿಥಿಗಳೆಲ್ಲಾ ಚಪ್ಪಾಳೆ ಹೊಡೆಯುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಮದುವೆಯ ಕೊನೆಗೆ ವಧು ಮನೆಯಿಂದ ಯಾವುದೇ ಗೃಹಪಯೋಗಿ ವಸ್ತುಗಳಾಗಲಿ, ಬೈಕ್ ಹೀಗೆ ವರದಕ್ಷಿಣೆಯಾಗಿ ವರನ ಕುಟುಂಬಸ್ಥರನ್ನು ಏನು ಪಡೆದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವರ ಹಾಗೂ ಆತನ ಕುಟುಂಬಸ್ಥರ ನಿರ್ಧಾರಕ್ಕೆ ಸ್ಥಳೀಯರ ಅರಣ್ಯ ಅಧಿಕಾರಿ ರಾಜಕುಮಾರ್ ಬೋನಿವಾಲ್ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಮದುವೆಯಲ್ಲಿ ಭಾಗಿಯಾದ ಅತಿಥಿಗಳು ಇದನ್ನು ನೋಡಿ ಬೇರೆಯವರು ವರದಕ್ಷಿಣೆ ತೆಗೆದುಕೊಳ್ಳೋದನ್ನು ನಿಲ್ಲಿಸಲಿ ಎಂದು ಮಾತನಾಡಿಕೊಳ್ಳುತ್ತಿದ್ದರು.