ಒಂದೇ ಒಂದು ‘ವಸ್ತು’ವಿಗಾಗಿ ‘ಸಾಹುಕಾರ’ನ ಸಿಟ್ಟು – ಸಹೋದರನ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

Public TV
2 Min Read
Ramesh Jarkiholi Satish Jarkiholi A

ಬೆಂಗಳೂರು: ಲೋಕಸಭಾ ಚುನಾವಣೆ ಮತದಾನ ಮುಕ್ತಾಯವಾಗುತ್ತಿದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಇತ್ತ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದು, ಪಕ್ಷದ ವಿರುದ್ಧ ಅವರು ಸಿಟ್ಟು ಮಾಡಿಕೊಳ್ಳಲು ಕಾರಣ ಏನು ಎನ್ನುವುದನ್ನು ಸಚಿವ ಸತೀಶ್ ಜಾರಕಿಹೊಳಿ ಬಿಚ್ಚಿಟ್ಟಿದ್ದಾರೆ.

ರಮೇಶ್ ಜಾರಕಿಹೊಳಿ ಅವರು ಆ ಒಂದೇ ಒಂದು ವಸ್ತುಗಾಗಿ ಸಿಟ್ಟಾಗಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಸಹೋದರರನ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಬಿಜೆಪಿ ಬೆಂಬಲ ನೀಡುತ್ತಾರೆ. ಈ ಬಗ್ಗೆ ಅವರಿಗೆ ಪ್ರಶ್ನೆ ಮಾಡಿ. ಬೇರೆ ಅವರ ವಿರುದ್ಧ ಆರೋಪ ಮಾಡುವ ಮುನ್ನ ಅವರು ಸ್ಪಷ್ಟವಾಗಿ ಇದ್ದರಾ ಎಂಬುವುದನ್ನು ತಿಳಿದುಕೊಳ್ಳಬೇಕು. ಎಂಎಲ್‍ಎ ಎಂಬ ಒಂದು ಅಂಶವನ್ನು ಬಿಟ್ಟರೇ ಅವರಿಗೆ ಬೇರೆ ಯಾವುದೇ ಅರ್ಹತೆ ಇಲ್ಲ. ಇದು ರಾಜ್ಯದ ಎಲ್ಲಾ ಜನರಿಗೂ ಗೊತ್ತು. ಪಕ್ಷಕ್ಕೆ ರಾಜೀನಾಮೆ ನೀಡಿ ಮರು ಆಯ್ಕೆ ಆಗಿ ಬರಲಿ. ಅವರ ಅರ್ಹತೆ ತಿಳಿಯುತ್ತದೆ ಎಂದು ಸವಾಲು ಎಸೆದರು.

sathish jarakiholi

ಇದೇ ವೇಳೆ ರಮೇಶ್ ಅವರು ತಮ್ಮ ಜೀವನದಲ್ಲಿ ಮಾಡಿಕೊಂಡಿದ್ದ ಒಂದು ವಸ್ತುವನ್ನು ಕಳೆದುಕೊಂಡಿದ್ದು, ಅದಕ್ಕಾಗಿಯೇ ಈ ರೀತಿ ಆಡುತ್ತಿದ್ದಾರೆ ಎಂದು ನುಕ್ಕು ಸುಮ್ಮನಾದರು. ಆ ವಸ್ತುವನ್ನು ಕಳೆದುಕೊಂಡ ಬಗ್ಗೆ ಅವರಿಗೆ ಪ್ರಶ್ನೆ ಮಾಡಿ. ಆ ಬಗ್ಗೆ ನಾನು ಹೇಳಲು ಆಗಲ್ಲ. ಅವನೇ ಏನೋ ತಿಳಿದುಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾನೆ. ನೀವೇ ಈ ಬಗ್ಗೆ ಪ್ರಶ್ನೆ ಮಾಡಿ ಎಂದರು.

ಇತ್ತ ರಾಜೀನಾಮೆ ಅಂತಿಮ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿರುವ ರಮೇಶ್ ಜಾರಕಿಹೊಳಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದರು. ಆ ವಸ್ತು ಅಂದರೆ ‘ಮಂತ್ರಿ ಸ್ಥಾನ’ ಎನ್ನಬಹುದು ಅದಕ್ಕಾಗಿಯೇ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ನಾನು ಸ್ವತಃ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಸಚಿವ ಸ್ಥಾನ ಬೇಕು ಎಂದಿದ್ದರೆ ದೆಹಲಿಗೆ ಹೋಗಿ ತರುತ್ತೇನೆ. ನಾನು ಯಾವತ್ತು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಅವನೇ ನನ್ನ ಮನೆಗೆ 2 ಬಾರಿ ಭೇಟಿ ನೀಡಿದ್ದನ್ನು ನೀವು ನೋಡಿದ್ದೀರಿ ಎಂದು ತಿರುಗೇಟು ನೀಡಿದರು.

ramesh

ಸತೀಶ್ ಅವರ ವಸ್ತು ಹೇಳಿಕೆ ಸದ್ಯ ಇಬ್ಬರ ನಡುವೆ ವಾಕ್ ಸಮರಕ್ಕೆ ಕಾರಣವಾಗಿದ್ದು, ಸತೀಶ್ ಅವರ ನಗುವಿನ ಹಿಂದೆ ಇರುವ ‘ವಸ್ತು’ ಏನು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇತ್ತ ಪಕ್ಷಕ್ಕೆ ರಾಜೀನಾಮೆ ನೀಡಿಯೇ ಸಿದ್ಧ ಎನ್ನುತ್ತಿರುವ ರಮೇಶ್ ಜಾರಕಿಹೊಳಿ ಅವರು ಇನ್ನೇರಡು ದಿನಗಳಲ್ಲಿ ನಿಮಗೇ ಸಿಹಿ ಸುದ್ದಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *