ಯಾದಗಿರಿ: ಕಾಂಗ್ರೆಸ್ ಏಜೆಂಟ್ ಓರ್ವ ಮತಗಟ್ಟೆಯಲ್ಲಿ ಇವಿಎಂ ಯಂತ್ರವನ್ನು ಧ್ವಂಸಗೊಳಿಸಿದ್ದಾನೆ. ಜಿಲ್ಲೆಯ ಸುರಪುರ ತಾಲೂಕಿನ ಕರಿಬಾವಿ ಗ್ರಾಮದ ಮತಗಟ್ಟೆ 31ರಲ್ಲಿ ಕಾಂಗ್ರೆಸ್ ಏಜೆಂಟ್ ಪುಂಡಾಟ ಮೆರೆದಿದ್ದಾನೆ.
ಗುರುನಾಥ್ ಎಂಬಾತನೇ ಇವಿಎಂ ಧ್ವಂಸಗೊಳಿಸಿದ ಕಾಂಗ್ರೆಸ್ ಚುನಾವಣೆ ಏಜೆಂಟ್. ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ಪರ ನೇಮಕವಾಗಿದ್ದ ಗುರುನಾಥ್ ಚುನಾವಣೆ ಏಜೆಂಟ್ ನಾಗಿ ಮತಗಟ್ಟೆಯಲ್ಲಿ ನಿಯೋಜನೆಗೊಂಡಿದ್ದ.
ಮತಗಟ್ಟೆಯಲ್ಲಿ ಬಿಜೆಪಿ ಏಜೆಂಟ್ ಮತದಾರರಿಗೆ ಕಮಲದ ಗುರುತಿಗೆ ಮತ ಹಾಕಿ ಎಂದು ಹೇಳುತ್ತಿದ್ದಾನೆ ಎಂದು ಆರೋಪಿಸಿ ಇವಿಎಂ ಯಂತ್ರವನ್ನು ಧ್ವಂಸಗೊಳಿಸಿದ್ದಾನೆ. ಇವಿಎಂ ಯಂತ್ರದಲ್ಲಿನ ಕಂಟ್ರೋಲ್ ಯೂನಿಟ್ ಧ್ವಂಸವಾಗಿತ್ತು.
ಕೂಡಲೇ ಚುನಾವಣೆ ಸಿಬ್ಬಂದಿ ಕೆಲ ಸಮಯ ಮತದಾನ ನಿಲ್ಲಿಸಿ ಕಂಟ್ರೋಲ್ ಯುನಿಟ್ ಸರಿಪಡಿಸಿ ಮತದಾನ ಪುನಾರಂಭಿಸಿದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಗುರುನಾಥ್ ನನ್ನು ಬಂಧಿಸಿದ್ದಾರೆ. ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.