ಬೆಂಗಳೂರು: ಇಂದು ರಾಜ್ಯಾದ್ಯಂತ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಂಗಳೂರಿಗೆ ಒಂದು ಅಪವಾದವಿದೆ. ಈ ಅಪವಾದವನ್ನು ಅಳಿಸಿಹಾಕಲು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು ಎಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವಿ ಸದಾನಂದ ಗೌಡ ಮನವಿ ಮಾಡಿದ್ದಾರೆ.
ಕುಟುಂಬ ಸಮೇತರಾಗಿ ಹೆಬ್ಬಾಳದ ಭೂಪಸಂದ್ರದ ಮತಗಟ್ಟೆಗೆ ಬಂದಿರುವ ಡಿ.ವಿ ಸದಾನಂದಗೌಡರು ಮೊದಲು ಮತದಾನ ಮಾಡಿದರು.
ಮತದಾನ ಪ್ರಕ್ರಿಯೆಗೂ ಮುಂಚೆಯೇ ಮತಗಟ್ಟೆಗೆ ಬಂದ ಡಿವಿಎಸ್, ಪ್ರತಿಬಾರಿ ಕ್ಯೂ ನಲ್ಲಿ ನಿಂತು ಮತದಾನ ಪ್ರಾರಂಭವಾಗುವ ವೇಳೆಗೆ ಕುಟುಂಬ ಸಮೇತ ಮತದಾನ ಮಾಡುತ್ತೇವೆ. ಇಡೀ ಕ್ಷೇತ್ರ ವ್ಯಾಪ್ತಿ ಸಂಚಾರ ನಡೆಸಬೇಕಾಗುತ್ತೆ ಈ ಹಿನ್ನೆಲೆಯಲ್ಲಿ ಬೆಳಗ್ಗೆ ಮತದಾನ ಮಾಡಿ ತೆರಳುತ್ತೇನೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ದೇಶದ ಹಿತದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಬೆಂಗಳೂರಿನಲ್ಲಿ ವಿದ್ಯಾವಂತರು ಮತದಾನ ಮಾಡುವುದಿಲ್ಲವೆಂದು ಅಪವಾದವಿದೆ. ಈ ಹಿನ್ನಲೆ ಬೆಂಗಳೂರಿನ ಜನರು ಈ ಅಪವಾದ ಅಳಿಸಿಹಾಕಲು ಹೆಚ್ವಿನ ಪ್ರಮಾಣದಲ್ಲಿ ಮತದಾನ ಮಾಡಬೇಕು. ಈ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಗೌರವ ನೀಡಬೇಕು ಎಂದು ಮನವಿ ಮಾಡಿದರು.