ಮೈಸೂರು: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿಗೆ ಕೂಡ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರಿಗೆ ನೀಡಲು ವಿಶೇಷ ಉಡುಗೊರೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನವದುರ್ಗಿಯರ ಆರಾಧಕರಾಗಿರುವ ನರೇಂದ್ರ ಮೋದಿ ಅವರಿಗೆ ಚಾಮುಂಡೇಶ್ವರಿ ಅಮ್ಮನವರ ಬೆಳ್ಳಿ ಮೂರ್ತಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಮೋದಿ ಅವರು ಬರೆದಿರುವ ಕವನಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಿರುವ ಕವನ ಸಂಕಲನಗಳನ್ನು ಸಹ ಇಂದು ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಮೋದಿ ಅವರಿಗೆ ಕನ್ನಡಕ್ಕೆ ಭಾಷಾಂತರಗೊಂಡ ಅವರ ಕವನ ಸಂಕಲಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.
ಈ ಬಗ್ಗೆ ಮಾಜಿ ಸಚಿವ ರಾಮ್‍ದಾಸ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ನರೇಂದ್ರ ಮೋದಿಯವರು ಬಾಲ್ಯದಿಂದಲೂ ಕೂಡ ತಾಯಿ ದುರ್ಗಿಯ ಆರಾಧಕರು. ನಿರಂತರವಾಗಿ ತಾಯಿಯ ಆರಾಧಕರಾಗಿ ತಾವು ಪ್ರತಿಯೊಂದು ಕಾರ್ಯ ಕೂಡ ಮಾಡುತ್ತಾ ಬಂದವರು. ಭಾರತದಲ್ಲಿ ಇರುವಂತಹ 11 ದೇವಸ್ಥಾನಗಳಿಗೆ ಪ್ರಸಾದ ಯೋಜನೆಯಡಿಯಲ್ಲಿ ತಲಾ 100 ಕೋಟಿ ರೂ. ಬಜೆಟ್‍ನಲ್ಲಿ ಮಂಡಿಸಿದರು. ಆ 11 ದೇವಸ್ಥಾನದಲ್ಲಿ ದಕ್ಷಿಣ ಭಾರತದಲ್ಲಿ ತಾಯಿ ಚಾಮುಂಡೇಶ್ವರಿ ದೇವಸ್ಥಾನ ಕೂಡ ಒಂದಾಗಿದೆ ಎಂದರು. ಇದನ್ನೂ ಓದಿ: ಮೋದಿ ಎಂದೂ ಮರೆಯದಂತಹ ಗಿಫ್ಟ್ ನೀಡಲಿದೆ ಬಿಜೆಪಿ ಘಟಕ!
ಭಾರತ ದೇಶವನ್ನು ವಿಶ್ವಗುರು ಮಾಡೋಕ್ಕೆ ಹೊರಟ ಮೋದಿ ಅವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದದ ಅವಶ್ಯಕತೆ ಇದೆ ಎಂದು ಚಾಮುಂಡಿ ಬೆಟ್ಟದಲ್ಲಿ ಅವರ ಹೆಸರಿನಲ್ಲಿ ಪೂಜೆ ನಡೆಯುತ್ತಿದೆ. ಆ ಪ್ರಸಾದ ಮತ್ತು ಆ ತಾಯಿಯ ವಿಗ್ರಹವನ್ನು ಕೊಡುವುದರ ಮೂಲಕ ಅವರಿಗೆ ತಾಯಿಯ ಆಶೀರ್ವಾದ ಇರಲಿ ಎಂದು ಕೋರಿಕೊಳ್ಳುತ್ತೇನೆ ಅಂದ್ರು.