ಮುಂಬೈ: 2019 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ 15 ಮಂದಿಯ ಆಟಗಾರರ ಪಟ್ಟಿಯನ್ನ ಏಪ್ರಿಲ್ 15ಕ್ಕೆ ಬಿಸಿಸಿಐ ಪ್ರಕಟಿಸಲಿದೆ.
ವಿರಾಟ್ ಕೊಹ್ಲಿ ನಾಯತ್ವದ ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದು, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈಟ್ ನೀಡುವ ನಿರೀಕ್ಷೆ ಇದೆ. ಇದುವರೆಗೂ ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ 15 ಆಟಗಾರರ ತಂಡದ ಪಟ್ಟಿಯನ್ನು ಏಪ್ರಿಲ್ 3 ರಂದು ಪ್ರಕಟಿಸಿತ್ತು.
ಟೀಂ ಇಂಡಿಯಾ ತಂಡದಲ್ಲಿ ಪ್ರಮುಖವಾಗಿ ನಂ.4ರ ಬ್ಯಾಟ್ಸ್ ಮನ್ ಸ್ಥಾನ ಕುರಿತ ಆಯ್ಕೆ ಬಗ್ಗೆ ಹೆಚ್ಚಿನ ಕುತೂಹಲವಿದೆ. ಈಗಾಗಲೇ ವಿಶ್ವಕಪ್ ಉದ್ದೇಶದಿಂದ ಈ ಸ್ಥಾನದಲ್ಲಿ ಹಲವು ಆಟಗಾರರನ್ನ ಬಿಸಿಸಿಐ ಆಯ್ಕೆ ಸಮಿತಿ ಪ್ರಯೋಗ ನಡೆಸಿದೆ. ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ವಿಜಯ್ ಶಂಕರ್ ಅವರು ಹೆಸರುಗಳು ರೇಸ್ ನಲ್ಲಿದ್ದು, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಕೂಡ ಪಟ್ಟಿಯಲ್ಲಿದ್ದಾರೆ.
ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್, ಎಂಎಸ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ತಂಡದ ಬೆನ್ನೆಲುಬಾಗಿದ್ದು, ಟಾಪ್ ಮೂರು ಸ್ಥಾನದಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್, ನಾಯಕ ವಿರಾಟ್ ಕೊಹ್ಲಿ ತಂಡದ ಶಕ್ತಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ತಂಡದ ವೇಗದ ಬೌಲರ್ ಗಳ ಪಟ್ಟಿಯಲ್ಲಿದ್ದರೆ, ಕುಲ್ದೀಪ್ ಯಾದವ್, ಚಹಲ್ ಸ್ಪೀನ್ ಬೌಲರ್ ಗಳಾಗಿ ಹೆಚ್ಚಿನ ಪ್ರಭಾವ ಬೀರಿದ್ದಾರೆ. ಟೀಂ ಇಂಡಿಯಾ ಜೂನ್ 06 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಹೋರಾಟವನ್ನ ಆರಂಭಿಸಲಿದೆ.