ಐಪಿಎಲ್ 2019: ಸತತ 6ನೇ ಸೋಲುಂಡ ಕೊಹ್ಲಿ ಪಡೆ

Public TV
2 Min Read
RCB 1

ಬೆಂಗಳೂರು: 2019ರ 12ನೇ ಐಪಿಎಲ್ ಆವೃತ್ತಿಯಲ್ಲಿ ಸೋಲಿನ ಕಹಿಯನ್ನು ಮುಂದುವರಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6ನೇ ಪಂದ್ಯದಲ್ಲೂ ಸೋಲುಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರ್ ಸಿಬಿ ಸುಲಭ ತುತ್ತಾಯಿತು. ಆ ಮೂಲಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ತೋರಿದ ಡೆಲ್ಲಿ 4 ವಿಕೆಟ್ ಗಳೊಂದಿಗೆ ಗೆಲುವು ಪಡೆಯಿತು.

ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಕೊಹ್ಲಿ ಪಡೆ ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಡೆಲ್ಲಿ ಬೌಲರ್ ರಬಾಡಾ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. 150 ರನ್ ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 7 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು 152 ಗಳಿಸಿ  ಜಯ ಪಡೆಯಿತು.

ಆರಂಭದಲ್ಲಿ ಧವನ್ ವಿಕೆಟ್ ಪಡೆದು ಡೆಲ್ಲಿ ತಂಡಕ್ಕೆ ಅಘಾತ ನೀಡಲು ಆರ್ ಸಿಬಿ ಬೌಲರ್ ಟಿಮ್ ಸೌಥಿ ಯಶಸ್ವಿಯಾದರೂ ಪಂದ್ಯದ ಮೇಲಿನ ಹಿಡಿತ ಮುಂದುವರಿಸಲು ಸಾಧ್ಯವಾಗಲಿಲ್ಲ. ಡೆಲ್ಲಿ ತಂಡದ ಭರವಸೆಯ ಯುವ ಆಟಗಾರರಾದ ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಆರ್‍ಸಿಬಿ ಬೌಲರ್‍ಗಳ ಲೆಕ್ಕಚಾರವನ್ನು ತಲೆಕೆಳಗಾಗಿ ಮಾಡಿದ್ರು. ನಾಯಕ ಶ್ರೇಯಸ್ ಅಯ್ಯರ್ 40 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಮಿಂಚಿದರೆ ಪೃಥ್ವಿ ಶಾ 28 ರನ್, ಇಂಗ್ರಾಮ್ 22 ರನ್ ಗಳಿಸಿ ತಂಡ ಗೆಲುವಿಗೆ ಕಾರಣರಾದರು.

ಇದಕ್ಕೂ ಮುನ್ನ ಬ್ಯಾಟ್ ನಡೆಸಿದ ಆರ್ ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮ ಮೇಲಿನ ಜವಾಬ್ದಾರಿಯನ್ನು ನಿರ್ವಹಿಸಲು ಪ್ರಯತ್ನಿಸಿದರು. ಇದಕ್ಕೆ ಸಾಕ್ಷಿ ಎಂಬಂತೆ ಇಂದಿನ ಪಂದ್ಯದಲ್ಲಿ ಕೊಹ್ಲಿ ಸತತ 17 ಎಸೆತಗಳಲ್ಲಿ ಒಂಟಿ ರನ್ ಕಾದಿಯುವ ಮೂಲಕ ಗಮನ ಸೆಳೆದರು. ಪಂದ್ಯದಲ್ಲಿ ಕೊಹ್ಲಿ 33 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಮೂಲಕ 41 ರನ್ ಗಳಿಸಿ ನಿರ್ಗಮಿಸಿದರು. ಉಳಿದಂತೆ ಅಲಿ 32 ರನ್, ಆಕ್ಷದೀಪ್ ನಾಥ್ 19, ಎಬಿಡಿ 17 ರನ್ ಗಳಿಸಿದ್ದರು. ಡೆಲ್ಲಿ ಪರ ಮಿಂಚಿನ ಬೌಲಿಂಗ್ ದಾಳಿ ನಡೆಸಿದ ರಬಾಡಾ 21 ರನ್ ನೀಡಿ 4 ವಿಕೆಟ್ ಪಡೆದು ಆರ್ ಸಿಬಿ ಸೋಲಿಗೆ ಪ್ರಮುಖ ಕಾರಣರಾದ್ರು.

Share This Article
Leave a Comment

Leave a Reply

Your email address will not be published. Required fields are marked *