ಬಳ್ಳಾರಿ: ದೋಸ್ತಿಗಳ ಪಾಲಿಗೆ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿರೋ ಸಚಿವ ಡಿಕೆ ಶಿವಕುಮಾರ್, ಟ್ರಬಲ್ ಬಂದಾಗಲೆಲ್ಲಾ ಸಮಸ್ಯೆಗಳನ್ನು ಯಶಸ್ವಿಯಾಗೇ ನಿರ್ವಹಿಸಿದ್ದಾರೆ. ಆದ್ರೆ ಇದೀಗ ಬಳ್ಳಾರಿ ಕಾಂಗ್ರೆಸ್ಸಿನ ಟಬ್ರಲ್‍ಗಳನ್ನ ಬಗೆಹರಿಸೋದೆ ಟಬ್ರಲ್ ಶೂಟರ್‍ಗೆ ಬಹುದೊಡ್ಡ ತಲೆನೋವಾಗಿದೆ. ಅಷ್ಟೇ ಅಲ್ಲ ಮುನಿಸಿಕೊಂಡ ನಾಯಕರನ್ನು ಓಲೈಸಲು ಖುದ್ದು ಕೆಪಿಸಿಸಿ ಅಧ್ಯಕ್ಷರು, ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನವೂ ಯಶಸ್ವಿಯಾಗಿಲ್ಲ. ಇದು ಉಗ್ರಪ್ಪಗೆ ಹೊಸ ತೆಲೆನೋವು ತಂದಿಟ್ಟಿದೆ.
ಹೌದು. ಬಳ್ಳಾರಿ ಕಾಂಗ್ರೆಸ್ ಅಂದ್ರೆ ಅಲ್ಲಿ ಬಂಡಾಯ, ಕಿತ್ತಾಟ, ಬಡಿದಾಟ ಸಾಮಾನ್ಯ ಅನ್ನೋ ಮಾತು ಮೇಲಿಂದ ಮೇಲೆ ಸಾಬೀತಾಗುತ್ತಿದೆ. ಇದಕ್ಕಂತಲೇ ರಾಜ್ಯ ನಾಯಕರು ಬಳ್ಳಾರಿ ಕೋಟೆಯ ಭಿನ್ನಮತ ಶಮನಗೊಳಿಸಲು ಪಕ್ಷದ ಟ್ರಬಲ್ ಶೂಟರ್ ಸಚಿವ ಡಿಕೆಶಿ ಹೆಗಲಿಗೆ ಭಾರ ಹಾಕಿದ್ದಾರೆ. ಆದ್ರೆ ಸದ್ಯಕ್ಕೆ ಡಿಕೆಶಿ ಹಾಕಿದ ಯಾವ ಪ್ಲಾನೂ ಇಲ್ಲಿ ವರ್ಕೌಟ್ ಆಗುತ್ತಿಲ್ಲ.
ಒಂದೆಡೆ ಶಾಸಕ ಭೀಮಾನಾಯ್ಕ್, ಪಕ್ಷದ ನಾಯಕರು ಮಾತು ಕೇಳತ್ತಿಲ್ಲ. ಇನ್ನೊಂದೆಡೆ ಶಾಸಕ ಗಣೇಶ್ ಜೈಲಿನಲ್ಲಿರುವುದು ಕಂಪ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಮಧ್ಯೆ ಕ್ಷೇತ್ರದ ಉಸ್ತುವಾರಿ ಹೊಣೆ ಹೊತ್ತಿರುವ ಕೆಪಿಸಿಸಿ ಉಪಾಧ್ಯಕ್ಷ ಸೂರ್ಯನಾರಾಯಣರೆಡ್ಡಿ ಇದೀಗ ಅಸಮಧಾನಗೊಂಡಿರುವುದು ಕಾಂಗ್ರೆಸ್ ನಾಯಕರಿಗೆ ಬಿಸಿತುಪ್ಪವಾಗಿ ಪರಿಗಣಿಸಿದೆ.
ಅಂದಹಾಗೆ ಕಳೆದ ಬಳ್ಳಾರಿ ಬೈ ಎಲೆಕ್ಷನ್ ವೇಳೆ ಪಕ್ಷದಲ್ಲಿನ ಭಿನ್ನಮತ ಬಂಡಾಯ ಶಮನಗೊಳಿಸಿ ಡಿಕೆ ಶಿವಕುಮಾರ್ ಸಕ್ಸಸ್ ಕಂಡಿದ್ರು. ಅಂದು ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ರು. ಆದ್ರೆ ಈ ಬಾರಿ ಮಾತ್ರ ಪಕ್ಷದಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಬಂಡಾಯ ಶಮನಗೊಳ್ಳುವಂತೆ ಕಾಣ್ತಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಡಿಕೆಶಿ, ಉಗ್ರಪ್ಪ ನಾಮಪತ್ರ ಸಲ್ಲಿಕೆ ದಿನ ನಡೆಸಿದ ಸಂಧಾನ ಪ್ಲಾಪ್ ಆಗಿದೆ. ಅಲ್ಲದೆ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಎಂದು ಸ್ವತ: ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಫೋನ್ ಮೂಲಕ ಸೂಚನೆ ನೀಡಿದ್ರೂ ಕೈ ನಾಯಕರು ಕ್ಯಾರೆ ಎನ್ನುತ್ತಿಲ್ಲ.
ಒಟ್ಟಿನಲ್ಲಿ ಈ ಹಿಂದೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ರಾತ್ರೋ ರಾತ್ರಿ ಬಿಜೆಪಿ ಶಾಸಕರ ಮನೆಯಲ್ಲಿ ಮಿಡ್‍ನೈಟ್ ಆಪರೇಷನ್ ಮಾಡಿ ಸಕ್ಸಸ್ ಕಂಡಿದ್ದ ಡಿಕೆಶಿಗೆ ಇದೀಗ ಸ್ವಪಕ್ಷೀಯರ ಮುಂದೆಯೇ ಮುಖಭಂಗವಾಗಿದೆ.