ಜೆಡಿಎಸ್ ಜಾತ್ಯಾತೀತ ಅಲ್ಲ, ಅದು ಜಾತಿ ತಿಥಿ ಪಕ್ಷ: ಆರ್.ಅಶೋಕ್

Public TV
2 Min Read
R.Ashok JDS

– ಡಿಕೆಶಿ, ಎಚ್‍ಡಿಕೆ ಜೋಡೆತ್ತುಗಳಲ್ಲ, ಕುಂಟೆತ್ತುಗಳು

ಬೆಂಗಳೂರು: ಜೆಡಿಎಸ್‍ನವರು ಜಾತಿಯನ್ನು ತಿಥಿ ಮಾಡಿ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಜಾತ್ಯಾತೀತ ಅಲ್ಲ, ಜಾತಿ ತಿಥಿ ಪಕ್ಷ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.

ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್‍ನವರು ಒಕ್ಕಲಿಗರನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಸಾಕಷ್ಟು ಒಕ್ಕಲಿಗ ನಾಯಕರು ಬಂದು ಹೋಗಿದ್ದಾರೆ. ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರಿಗಿಂತ ದೊಡ್ಡ ಒಕ್ಕಲಿಗ ನಾಯಕರನ್ನು ರಾಜ್ಯ ಕಂಡಿಲ್ಲ. ಅವರು ಒಂದು ದಿನವೂ ಜಾತಿ ರಾಜಕಾರಣ ಮಾಡಿಲ್ಲ. ಎಸ್.ಎಂ.ಕೃಷ್ಣ ಅವರು ಸಂಕಷ್ಟದಲ್ಲಿ ಸಿಎಂ ಆಗಿದ್ದರೂ ಜಾತಿ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.

hdk dkshi

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದವರು. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಅವರಿಗೆ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಬಾರದು ಎನ್ನುವುದು ಗೊತ್ತಿಲ್ಲದೇ ಇರುವುದು ವಿಪರ್ಯಾಸ ಎಂದ ಅವರು, ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ಲೇವಡಿ ಮಾಡಿದರು.

ಮಂಡ್ಯದಲ್ಲಿ ಜಾತಿ ರಾಜಕೀಯ ಹೆಚ್ಚಾಗಿದೆ. ಮೈತ್ರಿ ಅಭ್ಯರ್ಥಿಯ ಪರ ನಡೆದ ಪ್ರಚಾರದ ವೇಳೆ ನಾಯ್ಡು ಜನಾಂಗವನ್ನು ಅಪಮಾನ ಮಾಡಿದ್ದಾರೆ. ಜೆಡಿಎಸ್‍ನವರು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಕರೆದು ಹಾರ ಹಾಕಿ, ಸನ್ಮಾನಿಸಿ ಅಪ್ಪಿಕೊಳ್ಳುತ್ತಾರೆ. ಚಂದ್ರಬಾಬು ಕೂಡ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ರಾಜಕಾರಣ ಮಾಡಿದವರಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತಕ್ಕ ಉತ್ತರ ನೀಡಿ, ಮೈತ್ರಿ ನಾಯಕರ ಬೆವರಿಳಿಸಿದ್ದಾರೆ ಎಂದು ಹೇಳಿದರು.

chandrababu naidu HDD HDK

ಕಾಂಗ್ರೆಸ್ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ. ಇದಕ್ಕೆ ಅವರ ಚುನಾವಣಾ ಪ್ರಣಾಳಿಕೆಯೇ ಸಾಕ್ಷಿ. ದೇಶದಲ್ಲಿದ್ದು ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವವರು, ಪಾಕಿಸ್ತಾನಕ್ಕೆ ಮಾಹಿತಿ ಕೊಡುವವರನ್ನು ಪೊಲೀಸರು ಬಂಧಿಸಲು ದೇಶದ್ರೋಹ ಕಾಯ್ದೆ ಅಸ್ತ್ರವಾಗಿದೆ. ಇದರ ಬಗ್ಗೆ ಸಾಮಾನ್ಯ ಜ್ಞಾನವೂ ಕಾಂಗ್ರೆಸ್‍ಗೆ ಇಲ್ಲ. ನಮ್ಮ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರ ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಈ ಮೂಲಕ ದೇಶ ವಿಭಜನೆಗೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ ಎಂದು ಆರ್.ಅಶೋಕ್ ದೂರಿದರು.

ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವ ಚಿತ್ರ ನಟರನ್ನು ಕಳ್ಳೆತ್ತುಗಳು ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಕರೆಯುತ್ತಿದ್ದಾರೆ. ಇದು ಸರಿಯಲ್ಲ. ಕಳ್ಳೆತ್ತುಗಳು ಎಂದವರು ಕುಂಟೆತ್ತುಗಳು. ಅವರಿಗೆ ನಡೆಯುವುದಕ್ಕೆ ಆಗುವುದಿಲ್ಲ. ಮೇಲಾಗಿ ಮಹಿಳೆಗೆ ಅಪಮಾನ ಮಾಡುತ್ತಿದ್ದಾರೆ. ಹೀಗಾಗಿ ಹೊರೆ ಹೊತ್ತ ಮಹಿಳೆಯ ಚಿಹ್ನೆಯನ್ನು ಜೆಡಿಎಸ್‍ನವರು ಬದಲಾಯಿಸಬೇಕು ಎಂದು ಒತ್ತಾಯಿಸಿದರು.

sumalatha ambareesh jds

ಕಾಂಗ್ರೆಸ್-ಜೆಡಿಎಸ್ ನಾಯಕರು ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಉಡುಗೊರೆಗಳನ್ನು ಹಂಚಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ವಕ್ತಾರ ಗೋ.ಮಧುಸೂಧನ್ ಅವರು ಮಾತನಾಡಿ, ಗುತ್ತಿಗೆದಾರರ ಮೇಲೆ ಐಟಿ ರೇಡ್ ಆದಾಗ ಸಿಎಂ ಮತ್ತು ಕಾಂಗ್ರೆಸ್ ಪ್ರಮುಖರು ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಆದರೆ ಈಗ ಹಾಸನದಲ್ಲಿ ಕಾಮಗಾರಿ ಮುಗಿಯುವ ಮೊದಲೇ ಗುತ್ತಿಗೆದಾರರಿಗೆ 1,433 ಕೋಟಿ ರೂ.ಗಳ ಬಿಲ್ ಪಾವತಿಸಲಾಗಿದೆ. ಇದು ನೇರವಾಗಿ ಚುನಾವಣಾ ಭ್ರಷ್ಟಾಚಾರಕ್ಕೆ ಬಳಕೆಯಾಗಿದೆ. ಇದರಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನೇರವಾಗಿ ಭಾಗಿದ್ದಾರೆ. ಅಧಿಕಾರವೇ ಇಲ್ಲದೇ ಇದ್ದರೂ ಸೂಪರಿಂಟೆಂಡೆಂಟ್ ಎಂಜಿನಿಯರ್‍ರಿಂದ ಸಾವಿರಾರು ಕೋಟಿ ರೂ.ಹಣ ಬಿಡುಗಡೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.

BJP g madhusudan

Share This Article
Leave a Comment

Leave a Reply

Your email address will not be published. Required fields are marked *