ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿಯೊಬ್ಬ ಠೇವಣಿ ಹಣವನ್ನು ಮೂಟೆಯಲ್ಲಿ ಹೊತ್ತುಕೊಂಡು ಬಂದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ವಿರುದ್ಧ ಸ್ಪರ್ಧಿಸಿದ್ದ ಯುವಕ ವಿನಯ್ ರಜಾವತ್ ಠೇವಣಿ ಹಣ ಹನ್ನೆರಡೂವರೆ ಸಾವಿರ ರೂಪಾಯಿಯನ್ನು ಒಂದು ಹಾಗೂ ಎರಡು ರೂಪಾಯಿ ನಾಣ್ಯಗಳ ರೂಪದಲ್ಲಿ ತಂದು ಕಟ್ಟಿದ್ದಾರೆ.
ಕಳೆದ ಬಾರಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಲು ಬೆಂಗಳೂರಿನಿಂದ ಹೆಲಿಕಾಫ್ಟರ್ ನಲ್ಲಿ ಈ ಯುವಕ ಬಂದಿಳಿದಿದ್ದ. ಆದರೆ, ಈ ಬಾರಿ ಎತ್ತಿನಗಾಡಿಯಲ್ಲಿ ಚಿಲ್ಲರೆ ನಾಣ್ಯಗಳ ಮೂಟೆ ಹಾಕಿಕೊಂಡು ಬಂದು ನಾಮಪತ್ರ ಸಲ್ಲಿಸಿದ್ದಾನೆ.
ನಾಣ್ಯಗಳೇ ತುಂಬಿದ್ದ ಚೀಲವನ್ನು ಗೆಳೆಯರ ಸಹಾಯದಿಂದ ಮೊದಲ ಮಹಡಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆಗೆದುಕೊಂಡು ಹೋದರು. ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಮುಖ್ಯಮಂತ್ರಿ ಸಹಿತವಾಗಿ ಬಂದು ನಾಮಪತ್ರ ಸಲ್ಲಿಸುವ ಸಮಯ ಹತ್ತಿರ ಬಂದಿದ್ದರಿಂದ ವಿನಯ್ ತಂದ ಹಣವನ್ನು ಎಣಿಕೆ ಮಾಡದೆ ಹಾಗೇ ಪಡೆದಿದ್ದಾರೆ ಎನ್ನಲಾಗಿದೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋತ ನಂತರ ವಿನಯ್ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವರಿವರಿಂದ ಒಂದು ಹಾಗೂ ಎರಡು ರೂಪಾಯಿ ನಾಣ್ಯ ಸಂಗ್ರಹ ಮಾಡಿದ್ದರು. ಇದೇ ಹಣದಲ್ಲಿ ಹನ್ನೆರಡೂವರೆ ಸಾವಿರ ರೂಪಾಯಿ ಠೇವಣಿ ಕಟ್ಟಿದ್ದಾರೆ.