ಧಾರವಾಡ: ರಿಮ್ಯಾಂಡ್ ಹೋಮ್‍ನಲ್ಲಿದ್ದ ಬಾಲಾಪರಾಧಿಯೋರ್ವ ಅಲ್ಲಿನ ಅಧಿಕಾರಿಗಳ ನೀಡುತ್ತಿದ್ದ ಕಿರುಕುಳ ತಾಳಲಾರದೇ ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಇರ್ಫಾನ್(17) ಎಂಬ ಬಾಲಾಪರಾಧಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಸಹಕಾರಿಸಿದ್ದಾನೆ ಎಂದು ಇರ್ಫಾನ್‍ನನ್ನು ನಗರದ ಹಿಂದಿ ಪ್ರಚಾರ ಸಭಾ ಬಳಿ ಇರುವ ರಿಮ್ಯಾಂಡ್ ಹೋಮ್ ನಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿನ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಇರ್ಫಾನ್ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ನಿನ್ನೆ ಈ ಘಟನೆ ನಡೆದಿದ್ದರೂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿಲ್ಲ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಕೂಡಾ ನಡೆದಿದೆ. ಮಗನಿಗೆ ಇಬ್ಬರು ಅಧಿಕಾರಿಗಳು ಕಿರುಕುಳ ಕೊಟ್ಟಿದ್ದಾರೆ ಎಂದು ಬಾಲಾಪರಾಧಿಯ ತಾಯಿ ಆರೋಪಿಸಿದ್ದಾರೆ.
ಮಗನ ಸಾವಿಗೆ ತಾಯಿ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಗಂಭೀರ ಆರೋಪ ಮಾಡಿದ ಬಳಿಕ ಸದ್ಯ ಉಪನಗರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.