ಏನಿದು ಉಪಗ್ರಹ ವಿರೋಧಿ ಅಸ್ತ್ರ? ಭಾರತದ ಸಾಧನೆ ಏನು?

Public TV
3 Min Read
anti satellite weapon e1553679688692

ಬೆಂಗಳೂರು: ಕ್ಷಿಪಣಿ ಮೂಲಕ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಹೊಂದುವ ಮೂಲಕ ವಿಶ್ವದ ಇತಿಹಾಸದಲ್ಲಿ ಭಾರತ ವಿಶೇಷ ಸಾಧನೆ ಮಾಡಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಉಪಗ್ರಹ ವಿರೋಧಿ ಅಸ್ತ್ರಗಳನ್ನು (ಆಂಟಿ-ಸ್ಯಾಟೆಲೈಟ್ ವೆಪನ್,ASAT) ಹೊಂದಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮೂಲಕ ವಿಶ್ವದ ಸ್ಪೇಸ್ ಸೂಪರ್ ಪವರ್ ದೇಶವಾಗಿ ಭಾರತದ ಹೊರಹೊಮ್ಮಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ ದೇಶವನ್ನು ಉದ್ದೇಶಿಸಿ ಮಾತನಾಡಿ ಭಾರತದ ವಿಜ್ಞಾನಿಗಳು `ಮಿಶನ್ ಶಕ್ತಿ’ ಹೆಸರಿನಲ್ಲಿ ನಡೆಸಿದ ಈ ಅಸ್ತ್ರದ ಪ್ರಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಈ ಸಾಧನೆಗೆ ಕಾರಣವಾದ ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಭಾರತದ ಸಾಧನೆ ಏನು?
ಗುರಿಯನ್ನು ನೋಡಿಕೊಂಡು ಗುಂಡಿನ ದಾಳಿ ಅಥವಾ ಏರ್ ಸ್ಟ್ರೈಕ್ ಮೂಲಕ ಬಾಂಬ್ ಹಾಕುವುದು ಇಂದಿನ ದಿನದಲ್ಲಿ ಕಷ್ಟದ ಕೆಲಸವಲ್ಲ. ಹಲವು ದೇಶಗಳು ಈ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದಿದೆ. ಆದರೆ ಉಪಗ್ರಹವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸವುದು ಸುಲಭದ ಕೆಲಸವಲ್ಲ. ಇದು ಬಹಳ ಕಷ್ಟದ ಕೆಲಸವಾಗಿದ್ದು, ಈ ಕಷ್ಟದ ಕೆಲಸವನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ) ವಿಜ್ಞಾನಿಗಳು ಯಶಸ್ವಿಯಾಗಿ ನಡೆಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ಯಾಕೆ ಕಷ್ಟ?
ಇನ್ನೊಂದು ದೇಶದ ಉಪಗ್ರಹ ನಮ್ಮ ದೇಶದ ಉಪಗ್ರಹದ ಮಾಹಿತಿ ಕದಿಯುತ್ತದೆ ಎಂದು ಗೊತ್ತಾದರೆ ನಾವು ದಾಳಿ ಮಾಡಬಹುದು. ದಾಳಿ ಮಾಡಲು ಸಾಮರ್ಥ್ಯ ಹೊಂದಿದರೂ ಉಪಗ್ರಹದ ಪಥವನ್ನು ಗುರುತಿಸುವುದು ಕಷ್ಟವಾಗುತ್ತದೆ. ಯಾಕೆಂದರೆ ಉಪಗ್ರಹಗಳು ಕಕ್ಷೆಯಲ್ಲಿ ತಿರುಗುತ್ತಲೇ ಇರುತ್ತದೆ. ಹೀಗಾಗಿ ನಾವು ಪ್ರಯೋಗಿಸುವ ಕ್ಷಿಪಣಿ ಆ ಉಪಗ್ರಹದ ಪಥವನ್ನು ನೋಡಿಕೊಂಡು ದಾಳಿ ಮಾಡಬೇಕಾಗುತ್ತದೆ. ಒಂದು ವೇಳೆ ನಮ್ಮ ಗುರಿ ತಪ್ಪಿ ಬೇರೆ ದೇಶದ ಉಪಗ್ರಹವನ್ನು ಹೊಡೆದು ಉರುಳಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ ಯುದ್ಧವೇ ಆರಂಭವಾಗಬಹುದು. ಹೀಗಾಗಿ ವಿರೋಧಿ ದೇಶದ ಉಪಗ್ರಹದ ಪಥವನ್ನು ಸರಿಯಾಗಿ ನೋಡಿಕೊಂಡು ದಾಳಿ ಮಾಡಬೇಕಾಗುತ್ತದೆ.

ಕಡಿಮೆ ಕಕ್ಷೆಯ ಉಪಗ್ರಹ ಯಾಕೆ?
ವಾಹಿನಿ, ಇಂಟರ್ ನೆಟ್ ಇತ್ಯಾದಿ ಸೇವೆಗಳನ್ನು ನೀಡುವ ಉಪಗ್ರಹ ಭೂಮಿಯಿಂದ ಸುಮಾರು 36 ಸಾವಿರ ಕಿ.ಮೀ ಎತ್ತರದ ಕಕ್ಷೆಯಲ್ಲಿ ಇರುತ್ತದೆ. ಆದರೆ ಒಂದು ಭಾಗದ ನಿಖರ ಚಿತ್ರಗಳನ್ನು ತೆಗೆಯಬೇಕಾದರೆ ಉಪಗ್ರಹಗಳು 300 ರಿಂದ 700 ಕಿ.ಮೀ ಎತ್ತರ ಕಕ್ಷೆಯಲ್ಲಿ ಇರುತ್ತದೆ. ಭಾರತ ಈಗ ಕಡಿಮೆ ಕಕ್ಷೆಯಲ್ಲಿದ್ದ ಉಪಗ್ರಹವನ್ನು ಕ್ಷಿಪಣಿ ಬಳಸಿ ಹೊಡೆದು ಉರುಳಿಸಿದೆ. ಭಾರತ ವಿದೇಶದ ಯಾವುದೇ ಉಪಗ್ರಹವನ್ನು ಹೊಡೆದು ಉರುಳಿಸಿಲ್ಲ. ಹೀಗಾಗಿ ನಾವು ಯಾವುದೇ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಉಪಗ್ರಹ ಗುರುತಿಸುವುದು ಹೇಗೆ?
ಬಾಹ್ಯಾಕಾಶಕ್ಕೆ ಯಾವುದೇ ಉಪಗ್ರಹ ಕಳುಹಿಸಬೇಕಾದರೂ ಅದಕ್ಕೆ ಅನುಮತಿ ಬೇಕಾಗುತ್ತದೆ. ಯಾವುದೇ ವಿದೇಶದ ಉಪಗ್ರಹ ಭಾರತ ಮೇಲೆ ಗೂಢಚಾರಿಕೆ ಮಾಡುತ್ತಿದೆ ಎನ್ನುವುದು ಹಾಸನದಲ್ಲಿರುವ ಮಾಸ್ಟರ್ ಕಂಟ್ರೋಲ್ ರೂಂಗೆ ಗೊತ್ತಾಗುತ್ತದೆ. ಈ ಉಪಗ್ರಹ ನಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿದೆ ಎನ್ನುವುದು ಗೊತ್ತಾದರೆ ದಾಳಿ ಮಾಡಬಹುದಾಗಿದೆ.

ಯಾಕೆ ಇಷ್ಟೊಂದು ಮಹತ್ವ?
ಭೂ, ವಾಯು, ನೌಕಾ ಸೇನಾ ಶಕ್ತಿಗಳ ಜೊತೆ ಈಗ ನಾವು ಬಾಹ್ಯಾಕಾಶದಲ್ಲೂ ಉಪಗ್ರಹವನ್ನು ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎನ್ನುವುದು ವಿಶ್ವಕ್ಕೆ ಪ್ರಕಟವಾಗಿದೆ. ವಿಶೇಷವಾಗಿ ಭಾರತದ ವಿಚಾರ ಬಂದಾಗ ಚೀನಾ ಯಾವಾಗಲೂ ಅಡ್ಡಗಾಲು ಹಾಕುತ್ತಲೇ ಇರುತ್ತದೆ. ಹೀಗಾಗಿ ನಾವು ಬಾಹ್ಯಾಕಾಶದ ಕ್ಷೇತ್ರದಲ್ಲೂ ಹಿಂದೆ ಉಳಿದಿಲ್ಲ ಎನ್ನುವ ಸಂದೇಶವನ್ನು ಭಾರತ ಚೀನಾಕ್ಕೆ ರವಾನಿಸಿದೆ.

ಯುದ್ಧದಲ್ಲಿ ಬಳಕೆ ಆಗಿದ್ಯಾ?
ಉಪಗ್ರಹ ವಿರೋಧಿ ಅಸ್ತ್ರಗಳ ಪರಿಕಲ್ಪನೆ ಹೊಸದೆನಲ್ಲ. 1980ರ ಅವಧಿಯ ಶೀತಲ ಸಮರದ ಸಮಯದಲ್ಲಿ ಅಮೆರಿಕ ಮತ್ತು ರಷ್ಯಾ ಈ ಅಸ್ತ್ರಗಳ ಪ್ರಯೋಗಿಕ ಪರೀಕ್ಷೆ ನಡೆಸಿದ್ದವು. 2007ರಲ್ಲಿ ಚೀನಾ ಈ ಪ್ರಯೋಗದಲ್ಲಿ ಯಶಸ್ವಿ ಆಯಿತು. ಇಲ್ಲಿಯವರೆಗೆ ಯಾವುದೇ ಯುದ್ಧದಲ್ಲಿ ಈ ಅಸ್ತ್ರಗಳ ಪ್ರಯೋಗ ಆಗಿಲ್ಲ. ಎಲ್ಲ ದೇಶಗಳು ತಮ್ಮ ನಿಷ್ಕ್ರೀಯ ಉಪಗ್ರಹಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ.

10 ವರ್ಷದ ಸಾಧನೆ:
ಉಪಗ್ರಹ ವಿರೋಧಿ ಅಸ್ತ್ರದ ನಿರ್ಮಾಣದ ಹಿಂದೆ ಡಿಆರ್‌ಡಿಒ ವಿಜ್ಞಾನಿಗಳ 10 ವರ್ಷದ ಶ್ರಮವಿದೆ. ಕೇರಳದ ತಿರುವನಂತಪುರಂನಲ್ಲಿ 2010ರ ಜನವರಿಲ್ಲಿ ನಡೆದ ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಈ ಅಸ್ತ್ರ ನಿರ್ಮಾಣಕ್ಕೆ ನಾವು ಕೈ ಹಾಕಿದ್ದೇವೆ ಎಂದು ಡಿಆರ್‌ಡಿಒ ಪ್ರಕಟಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *