ಬಾಗಲಕೋಟೆ: ಮುಂಚೆ ಹಾವು ಮುಂಗಸಿ ರೀತಿಯಲ್ಲಿದ್ದ ಗೂಳಿಗಳು ಈಗ ಒಂದಾಗಿವೆ. ಮೈತ್ರಿ ಸರ್ಕಾರ ಪತನವಾಗುತ್ತೆ ಅಂತಾ ಎರಡು ಗೂಳಿಗಳು ಜಾಗೃತಿಯಾಗಿ ಒಂದಾಗಿವೆ. ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತೇವೆ ಅಂತ ಸಿಎಂ ಕುಮಾರಸ್ವಾಮಿ, ಮಂತ್ರಿ ಸ್ಥಾನ ಕಳೆದುಕೊಂಡರೆ ಭವಿಷ್ಯ ಮುಗೀತು ಅಂತ ಸಚಿವ ಡಿಕೆ ಶಿವಕುಮಾರ್ ಮೇಲ್ನೋಟಕ್ಕೆ ಒಂದಾಗಿದ್ದಾರೆ ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಜೆಡಿಎಸ್ ಗೆಲ್ಲಿಸೋಕೆ ಕಾಂಗ್ರೆಸ್, ಕಾಂಗ್ರೆಸ್ ಗೆಲ್ಲಿಸೋಕೆ ಜೆಡಿಎಸ್ ಪ್ರಯತ್ನ ನಡೆಸೋದಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ನೇರವಾಗಿ ಹಾಗೂ ಬಹಿರಂಗವಾಗಿಯೇ ಬಡಿದಾಡ್ತಾರೆ. ಕೊನೆಗೆ ಕೊಂಬುಗಳಿಂದ ಪರಸ್ಪರ ತಿವಿದುಕೊಂದು ಎರಡು ಪಕ್ಷ ಸರ್ವನಾಶ ಆಗುತ್ತೆ. ಸದ್ಯ ವಿಧಿಯಿಲ್ಲದೇ ಒಂದಾಗಿದ್ದಾರೆ. ಒಂದು ಕಡೆ ದೇವೇಗೌಡ ಮತ್ತೊಂದು ಕಡೆ ಸಿದ್ಧರಾಮಯ್ಯ ಇಬ್ಬರು ದೃತರಾಷ್ಟ್ರರು. ಈ ಇಬ್ಬರು ಧೃತರಾಷ್ಟ್ರರು ಆಲಿಂಗನ ಮಾಡಿಕೊಂಡಿದ್ದಾರೆ. ರಾಜ್ಯದ ಭವಿಷ್ಯದ ದೃಷ್ಟಿಯಿಂದ ಈ ಎರಡು ಪಕ್ಷಗಳು ಒಂದಾಗಿದೆ ಆದರೆ ಮುಂದೆ ನಿರ್ನಾಮವಾಗುತ್ತೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವ್ಯಂಗ್ಯವಾಡಿದರು.
ಬಳಿಕ ತೇಜಸ್ವಿನಿ ಅನಂತಕುಮಾರ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ, ತೇಜಸ್ವಿನಿ ಅವರು ಟಿಕೆಟ್ ಅಪೇಕ್ಷೆ ಪಟ್ಟಿದ್ದು ನಿಜ, ಆದ್ರೆ ಟಿಕೆಟ್ ಕೈತಪ್ಪಿದ್ದು ಅವರಿಗೆ ಬೇಜಾರಾಗಿದ್ದು ನಿಜ. ಇದರಿಂದ ನಮಗೂ ನೋವಾಗಿದೆ. ಆದ್ರೆ ಇದು ಹಿರಿಯರು ತಗೆದುಕೊಂಡ ನಿರ್ಧಾರವಾಗಿರುವುದರಿಂದ ನಾವೆಲ್ಲ ಬದ್ಧ. ಅದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಸೇರಿದ್ದಾರೆ. ತಮಗೆ ಖುಷಿ ಬಂದ ಸಂದರ್ಭದಲ್ಲಿ ಏನ್ ಬೇಕಾದರೂ ಮಾತಾಡಬಹುದು ಅನ್ನೋ ಅಭಿಪ್ರಾಯದಲ್ಲಿ ಅವರಿದ್ದಾರೆ. ಇದು ಬಿಜೆಪಿಯ ಕಾರ್ಯಕರ್ತನಿಗೆ ಶೋಭೆ ತರುವಂತದಲ್ಲ. ನಿಮಗೆ ಇಷ್ಟ ಬಂದರೆ ರಮೇಶ್ ಜಿಗಜಿಣಗಿ ಅವರಿಗೆ ಬೆಂಬಲ ಕೊಡ್ತೀನಿ, ಇಲ್ಲಾಂದ್ರೆ ಸೋಲಿಸಿಬಿಡ್ತೀನಿ ಅನ್ನೋದು ಸರಿಯಲ್ಲ. ನೀವ್ಯಾರು ತೀರ್ಮಾನ ತಗೊಳ್ಳೋಕೆ? ರಾಷ್ಟ್ರೀಯ ನಾಯಕರ ತೀರ್ಮಾನವನ್ನ ಪ್ರಶ್ನೆ ಮಾಡೋದಾದ್ರೆ, ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ಇರೋಕೆ ಆಗಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.