ಬೆಂಗಳೂರು: ತೇಜಸ್ವಿನಿಯಂತಹ ಸುಸಂಸ್ಕೃತರಿಗೆ ಟಿಕೆಟ್ ಕೊಡದೇ ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ದುರಂತ ಎಂದು ಬೆಂಗಳೂರು ಉತ್ತರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ಹೇಳಿದ್ದಾರೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಅಭ್ಯರ್ಥಿ ಆಗುತ್ತಾರೆ ಎಂದು ನಾವು ಅಂದುಕೊಂಡಿದ್ದೇವು. ಏಕೆಂದರೆ ಈ ರಾಜ್ಯದಲ್ಲಿ ಅನಂತಕುಮಾರ್ ಅವರ ಕೊಡುಗೆ ಇದೆ. ಅನಂತಕುಮಾರ್ ಹಿರಿಯ ನಾಯಕರು. ಅವರು ಸದಾಕಾಲ ದೆಹಲಿಯಲ್ಲಿ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ತೇಜಸ್ವಿನಿ ಅವರು ಕೂಡ ಸಾರ್ವಜನಿಕ ಜೀವನದಲ್ಲಿ ಸಂಘ – ಸಂಸ್ಥೆ ಮುಖಾಂತರ, ಕಾಲೇಜಿನ ಮುಖಾಂತರ ಬಹಳ ಆಳವಾಗಿ ತೊಡಗಿಸಿಕೊಂಡವರು. ಅವರಿಗೆ ಟಿಕೆಟ್ ಸಿಗುತ್ತೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ ಎಂದರು.
ಈಗ ಅವರಂತಹ ಒಳ್ಳೆಯ ಹಿನ್ನೆಲೆ ಇರುವವರನ್ನು ಬಿಟ್ಟು ಎಲ್ಲೋ ಒಂದು ಕಡೆ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತನೆ ಮಾಡುವಂತ ಅಭ್ಯರ್ಥಿಗೆ ಸುಸಂಸಂಸ್ಕೃವಾದ ಬೆಂಗಳೂರು ದಕ್ಷಿಣವನ್ನು ನೀಡಲಾಗಿದೆ. ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣದಲ್ಲಿ ಕೊಟ್ಟಿರುವುದು ಆ ಭಾಗದ ಜನತೆಗೆ ಇಷ್ಟವಾಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಬೆಂಗಳೂರಲ್ಲಿ 4 ಕ್ಷೇತ್ರ ಇದೆ. ಕೇಂದ್ರ, ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಈ 4 ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಗೆಲ್ಲುವ ವಾತಾವಾರಣ ಕಂಡು ಬರುತ್ತಿದೆ ಎಂದರು.
ಕಠಿಣವಾಗಿರುವ ಬೆಂಗಳೂರು ದಕ್ಷಿಣದಲ್ಲೂ ಸಹ ಕಾಂಗ್ರೆಸ್ ಗೆಲ್ಲಬಹುದು ಎಂಬ ಬದಲಾವಣೆ ಸಹ ಸೋಮವಾರದಿಂದ ಕಾಣಿಸುತ್ತಿದೆ. ಬೆಂಗಳೂರು ದಕ್ಷಿಣದಲ್ಲಿ ಬೆಜೆಪಿ ಆಯ್ಕೆ ಮಾಡಿದ ಅಭ್ಯರ್ಥಿ ಹಿನ್ನೆಲೆಯಲ್ಲಿ ನಾವು ನಾಲ್ಕು ಸ್ಥಾನ ಗೆಲ್ಲುವ ಅವಕಾಶ ಹೊಂದಿದ್ದೇವೆ. ನಮ್ಮ ಪಕ್ಷದ ವರಿಷ್ಠರು, ಜೆಡಿಎಸ್ ಪಕ್ಷದ ವರಿಷ್ಠರು, ನಮ್ಮ ಕ್ಷೇತ್ರದ ಶಾಸಕರು ನೀವೇ ಅಭ್ಯರ್ಥಿ ಆಗಬೇಕೆಂದು ಹೇಳಿದ್ದರು. ಅವರ ಭಾವನೆಗೆ ಬೆಲೆ ಕೊಟ್ಟು ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.
ನಾನು ಈ ಬಾರಿ ಸಚಿವನಾಗಬೇಕು ಎಂದು ಬಯಸಿರಲಿಲ್ಲ. ಆದರೂ ಪಕ್ಷ ನನ್ನನ್ನು ಸಚಿವರಾಗಿ ಆಯ್ಕೆ ಮಾಡಿತ್ತು. ಭಾರತದ ಸಂಸತ್‍ನಲ್ಲಿ ಒಬ್ಬ ಸದಸ್ಯನಾಗಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕರೆ ನನ್ನ ಪಾಲಿಗೆ ದೊಡ್ಡ ಗೌರವ. ಜನರು ಆಶಿರ್ವಾದ ಮಾಡಿದರೆ ನಾನು ಅದನ್ನು ಸ್ವೀಕರಿಸುತ್ತೇನೆ. ಅದನ್ನು ಬಿಟ್ಟು ಮಂತ್ರಿ ಸ್ಥಾನ ಬಿಟ್ಟು ಹೋಗಬೇಕೆಂಬ ಅನಿವಾರ್ಯ ಆ ಆಲೋಚನೆ ನನಗಿಲ್ಲ. ಭಾರತದ ಸಂಸತ್ ನಮ್ಮ ದೇಶದ ಧ್ವನಿ ಅದು. ಅಂತಹದರಲ್ಲಿ ನಾನು ಒಬ್ಬ ಸದಸ್ಯನಾಗುವ ಅವಕಾಶ ಸಿಕ್ಕರೆ ನನ್ನ ಜೀವನದಲ್ಲಿ ಒಂದು ದೊಡ್ಡ ಹೆಜ್ಜೆ. ಇದರಿಂದ ನನ್ನ ಜೀವನ ಸಾರ್ಥಕ ಆಗುತ್ತದೆ ಎಂದರು.
ರಾಷ್ಟ್ರಮಟ್ಟದಲ್ಲಿ ಯಾರೇ ಬೆಳೆಯುತ್ತಿರುವ ಒಬ್ಬ ಸಾರ್ವಜನಿಕ ಜೀವನದ ಪ್ರತಿನಿಧಿಗೆ ರಾಷ್ಟ್ರಮಟ್ಟದ ಅನುಭವ ಸಿಕ್ಕರೆ ನಾವು ಇನ್ನು ಒಳ್ಳೆಯ ನಾಯಕರಾಗಿ ಬೆಳೆಯವ ಅನುಕೂಲ ಆಗಲಿದೆ. ನಾಳೆ ನಾವು ರಾಜ್ಯ ರಾಜಕಾರಣ ಮಾಡಬಹುದು. ಆದರೆ ನಾವು ದೆಹಲಿಯಲ್ಲಿ ಆ ಅನುಭವ ಪಡೆದರೆ ಇಡೀ ದೇಶದ ಸಮಗ್ರ ದೃಷ್ಟಿ ಭಾರತ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತದೆ. ಒಂದೊಂದು ರಾಜ್ಯ, ಒಂದೊಂದು ಸಂಸ್ಕೃತಿ, ಒಂದೊಂದು ಭಾಷೆ, ಅವರ ವಿಚಾರ ಭಾವವನ್ನು ಅರ್ಥ ಮಾಡಿಕೊಂಡಿದರೆ, ನಮ್ಮ ವ್ಯಕ್ತಿತ್ವ ಸುಧಾರಣೆ ಆಗುತ್ತದೆ ಎಂದು ತಿಳಿಸಿದರು.