ಬೆಂಗಳೂರು: ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮನೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಭ್ಯರ್ಥಿ ಘೋಷಣೆಯಾದ ಬಳಿಕ ಇಂದು ತೇಜಸ್ವಿ ಸೂರ್ಯ ಅವರು ತೇಜಸ್ವಿನಿ ಅನಂತ್ ಕುಮಾರ್ ಮನೆಗೆ ಆಶೀರ್ವಾದ ಪಡೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ತೇಜಸ್ವಿ ಸೂರ್ಯಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ತೇಜಸ್ವಿನಿ ಹೇಳಿದ್ದು ಏನು?
ಮಾತುಕತೆಯ ಬಳಿಕ ತೇಜಸ್ವಿ ಸೂರ್ಯ ಅವರು ಮನೆಯಲ್ಲೇ ಪ್ರತಿಕ್ರಿಯೆ ನೀಡಲು ಮುಂದಾಗಿದ್ದರು. ಇದರಿಂದ ಸ್ವಲ್ಪ ಗರಂ ಆದ ತೇಜಸ್ವಿನಿ, ಪ್ರಬುದ್ಧರಾಗಿ ವರ್ತಿಸಿ. ಇಲ್ಲಿ ಮಾತಾಡೋದು ಬೇಡ. ಕ್ಯಾಮರಾ ಮುಂದೆ ಬೇಡ, ಏನ್ ಹೇಳ್ಬೇಕು ಅದನ್ನ ನಿಮಗೆ ಹೇಳ್ತೇನೆ ಎಂದು ಹೇಳಿದರು.
ಇದು ಒಬ್ಬರಿಗೊಬ್ಬರು ಚರ್ಚೆ ಮಾಡುವ ಸ್ಥಳ ಅಲ್ಲ. ಇದರಿಂದ ನೀವೇನೂ ಸಾಧನೆ ಮಾಡಲು ಆಗಲ್ಲ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಪ್ರಬುದ್ಧತೆಯನ್ನು ಎಲ್ಲರ ಮುಂದೆ ತೋರಿಸಿ. ನಾವು ಒಂದು ಸಿದ್ಧಾಂತದ ಪರವಾಗಿದ್ದೇವೆ. ಹಾಗೆಯೇ ನರೇಂದ್ರ ಮೋದಿ ಮತ್ತು ದೇಶದ ಪರವಾಗಿದ್ದೇವೆ. ಸಪೂರ್ಣವಾಗಿ ಪ್ರಚಾರಕ್ಕೆ ಬೆಂಬಲಿಸುವುದಾಗಿ ಹೇಳಿದ್ರು.
ಇದೇ ವೇಳೆ ತೇಜಸ್ವಿ ಸೂರ್ಯ ಅವರು ಮನೆಯೊಳಗಡೆಯೇ ಭೋಲೋ ಭಾರತ್ ಮಾತಾಕಿ, ಅನಂತ್ ಕುಮಾರ್ ಜೀ ಕಿ ಜೈ ಅಂದ್ರು. ಈ ಸಂದರ್ಭದಲ್ಲಿ ಅನಂತ್ ಕುಮಾರ್ ಅಭಿಮಾನಿಗಳು ತೇಜಸ್ವಿ ಸೂರ್ಯ ಅವರಿಗೆ ದನಿಯಾಗಿ ಜೈಕಾರ ಕೂಗಿದ್ರು. ಆದರೆ ಅದರಲ್ಲೊಬ್ಬ ತೇಜಸ್ವಿ ಸೂರ್ಯ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ರು.