ಕೋಲಾರ: 7 ಬಾರಿ ಗೆದ್ದಿರುವ ನನಗೆ 8ನೇ ಬಾರಿ ಗೆಲ್ಲೋದು ಗೊತ್ತಿದೆ. ನಾಳೆ ನಾಮಪತ್ರ ಸಲ್ಲಿಕೆ ನಂತರ ಎಲ್ಲಾ ವಿರೋಧಿಗಳಿಗೆ ತಕ್ಕ ಉತ್ತರ ಕೊಡುತ್ತೇನೆ ಕಾದು ನೋಡಿ ಅಂತ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಇಂದು ಕೆ.ಎಚ್ ಮುನಿಯಪ್ಪ ಕೋಲಾರ ಲೋಕಸಭಾ ಕ್ಷೇತ್ರದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ತಮ್ಮ ಬೆಂಬಲಿಗರ ಜೊತೆ ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ನಾಳೆ ನಾಮಪತ್ರ ಸಲ್ಲಿಕೆಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಮನವಿ ಮಾಡಿದರು. ಕಾಂಗ್ರೆಸ್ಸಿನ ಭದ್ರಕೋಟೆಯಾಗಿರುವ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸಂಸತ್‍ನಲ್ಲಿ ವಿಶೇಷ ಮಾನ್ಯತೆ ಇದೆ. ಹೀಗಾಗಿ ಈ ಬಾರಿಯ ನಾನು ಮಾಡಿರುವ ಸಾಧನೆಗಳನ್ನ ಬೆಂಬಲಿಸಿ ಜನ ಮತ ನೀಡಲಿದ್ದು, ತಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ:ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ
ತಮಗೆ ಟಿಕೆಟ್ ನೀಡದಂತೆ ಹೈಕಮಾಂಡ್ ಬಳಿ ನಿಯೋಗ ತೆರಳಿದ್ದ ಭಿನ್ನಮತೀಯರು ನಾಳಿನ ನಾಮಪತ್ರ ಸಲ್ಲಿಕೆಗೆ ಬರಬೇಕಾಗಿ ಮನವಿ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಭಿನ್ನಮತೀಯರಿಗೂ ಸರ್ಕಾರ ಅಧಿಕಾರ ಅವಕಾಶಗಳನ್ನ ನೀಡಿದ್ದು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೇ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನ ಬೆಂಬಲಿಸಬೇಕು. ಭಿನ್ನಮತೀಯರು ನಾಮಪತ್ರ ಸಲ್ಲಿಕೆಗೆ ಬರದಿದ್ದರೆ ರಾಜ್ಯ ನಾಯಕರು ಅವರ ಜೊತೆ ಮಾತನಾಡಲಿದ್ದಾರೆ. ಅಮೇಲೆ ಮುಂದಿನ ನಿರ್ಧಾರ ಎಂದು ಮುನಿಯಪ್ಪ ತಿಳಿಸಿದರು.