ಲಾಟರಿ ಬಂಪರ್ – ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಸುಳ್ಯದ ವ್ಯಕ್ತಿ!

Public TV
1 Min Read
sullia sudhama lottery 3

ಮಂಗಳೂರು: ದಕ್ಷಿಣ ಕನ್ನಡದ ಸುಳ್ಯ ಮೂಲದ ಸಣ್ಣ ಹೋಟೆಲ್ ನಡೆಸುವ ವ್ಯಕ್ತಿಯೊಬ್ಬರು ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿದ್ದಾರೆ. ಕೇರಳ ರಾಜ್ಯ ಸರ್ಕಾರ ಪ್ರಾಯೋಜಿತ ಲಾಟರಿಯಲ್ಲಿ ಸುಳ್ಯದ ಸುಧಾಮ ಮಣಿಯಾಣಿ ಅವರಿಗೆ  4 ಕೋಟಿ ರೂ. ಬಂಪರ್ ಬಹುಮಾನ ಲಭಿಸಿದೆ.

ನಿತೀಶ್ ಹೋಟೆಲ್ ಮಾಲೀಕ ಸುಧಾಮ ಮಣಿಯಾಣಿ ಖರೀದಿಸಿದ್ದ ಎಸ್‍ಬಿ 131399 ನಂಬರಿನ ಲಾಟರಿ ಟಿಕೆಟ್‍ಗೆ ಮೊದಲ ಬಹುಮಾನ ಸಿಕ್ಕಿದೆ. ಮಾಹಿತಿ ಸಿಕ್ಕಿದ ಬಳಿಕ ಅವರು ಕೇರಳ ಲಾಟರಿಯ ವೆಬ್‍ಸೈಟ್‍ನಲ್ಲಿ ಟಿಕೆಟ್ ನಂಬರ್ ಚೆಕ್ ಮಾಡಿದ್ದು, ಬಹುಮಾನ ಬಂದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

sullia sudhama lottery 4

ಕಳೆದ ನಾಲ್ಕು ವರ್ಷಗಳಿಂದ ಕಾಸರಗೋಡು ಕಡೆಗೆ ಹೋದಾಗ ಒಂದು ಕೇರಳ ರಾಜ್ಯ ಲಾಟರಿ ಟಿಕೆಟ್ ಪಡೆಯುವ ಅಭ್ಯಾಸವನ್ನು ಸುಧಾಮ ಬೆಳೆಸಿಕೊಂಡಿದ್ದರು. ಆದರೆ ಇದೂವರೆಗೆ ಅವರು ಖರೀದಿಸಿದ ಯಾವುದೇ ಲಾಟರಿಗೆ ಬಹುಮಾನ ಸಿಕ್ಕಿರಲಿಲ್ಲ. ಫೆಬ್ರವರಿ ಕೊನೆಯಲ್ಲಿ ಪತ್ನಿಯ ಮನೆಯಾದ ಕಾಸರಗೋಡಿನ ಮಲ್ಲಕ್ಕೆ ಹೋಗಿದ್ದರು. ಅಲ್ಲಿಂದ ಮರಳಿ ಸುಳ್ಯಕ್ಕೆ ಬರುವಾಗ ಮುಳ್ಳೇರಿಯಾದಲ್ಲಿ 450 ರೂ. ನೀಡಿ 150 ರೂ. ಮುಖಬೆಲೆಯ ಸಮ್ಮರ್ ಬಂಪರ್ ಮೂರು ಟಿಕೆಟ್ ಖರೀದಿ ಮಾಡಿದ್ದರು. ಖರೀದಿ ಮಾಡಿದ ಒಂದು ಟಿಕೆಟ್‍ಗೆ ಬಂಪರ್ ಬಹುಮಾನ ಸಿಕ್ಕಿದೆ.

ಸುಳ್ಯ ಕಾಂತಮಂಗಲ ಬೂಡುಮಕ್ಕಿಯ ಅಚ್ಚುತ ಮಣಿಯಾಣಿ-ಸರಸ್ವತಿ ದಂಪತಿ ಪುತ್ರ ಸುಧಾಮ ಕಳೆದ 19 ವರ್ಷಗಳಿಂದ ಸುಳ್ಯ ನಗರದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಸುಳ್ಯಕ್ಕೆ ಬರುವ ಮೊದಲು ಗಡಿಪ್ರದೇಶವಾದ ಅಡ್ಯನಡ್ಕದಲ್ಲಿ ಐದು ವರ್ಷ ಹೋಟೆಲ್ ನಡೆಸಿದ್ದರು.

ಬಹುಮಾನ ಸಿಕ್ಕಿದ ಬಳಿಕವೂ ಸುಧಾಮ ಅವರು ಎಂದಿನಂತೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುಮಾನವಾಗಿ ಸಿಕ್ಕಿದ ಹಣದಲ್ಲಿ ಏನು ಮಾಡುತ್ತೀರಿ ಎಂದು ಕೇಳಿದ್ದಕ್ಕೆ, ಸದ್ಯಕ್ಕೆ ಏನು ಯೋಚನೆ ಮಾಡಿಲ್ಲ. ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

sullia sudhama lottery 2

Share This Article
Leave a Comment

Leave a Reply

Your email address will not be published. Required fields are marked *