– ಬೆಂಗಳೂರು ಗ್ರಾಮಾಂತರಿಂದ ಯಾರೇ ಸ್ಪರ್ಧಿಸಿದರೂ ಸ್ವಾಗತ
– ಸಿ.ಪಿ.ಯೋಗೇಶ್ವರ್ ಮಗಳು ನನಗೂ ಮಗಳೇ
ಬೆಂಗಳೂರು: ಶಾಸಕ ಶ್ರೀರಾಮುಲು ಅಣ್ಣನವರು ಹಿರಿಯ ನಾಯಕರು. ಅವರ ತಂತ್ರ ನನ್ನ ಮಂತ್ರ ಏನೂ ಇಲ್ಲ ಎಂದು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವರು, ನಾನು ಶ್ರೀರಾಮುಲು ಅವರ ಮೇಲೆ ಯುದ್ಧ ಮಾಡಲು ಹೋಗುವುದಿಲ್ಲ. ಶಾಸಕರು ಎಷ್ಟು ಬೇಕಾದರೂ ತಂತ್ರ, ಕುತಂತ್ರ ಮಾಡಲಿ. ಆದರೆ ನಾನು ಮಾತ್ರ ತಂತ್ರ, ಕುತಂತ್ರ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ಈ ಹಿಂದೆ ಬಳ್ಳಾರಿ ಜಿಲ್ಲೆಯ ಪರಿಸ್ಥಿತಿ ಹೇಗಿತ್ತು? ಈಗ ಹೇಗಿದೆ. ಬಡವರಿಗೆ ಹಿಂಸೆ ಕೊಡುವುದನ್ನು ನಿಲ್ಲಿಸಿದ್ದೇನೆ. ಕೆರೆ ತುಂಬಿಸುವ ಯೋಜನೆ ಕಾರ್ಯಗತ ಮಾಡಿದ್ದೇವೆ. ಜಿಲ್ಲೆಯಲ್ಲಿ ಬಹಳ ಉದ್ಯೋಗಗಳು ಖಾಲಿ ಇವೆ. ಹೀಗಾಗಿ ಅರ್ಹ ವ್ಯಕ್ತಿಗಳ ಆಯ್ಕೆಗೆ ಮುಂದಾಗಿದ್ದೇವೆ. ಜಿಲ್ಲೆಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಆರಂಭಿಸುವ ಯೋಚನೆ ನಡೆದಿದೆ. ಬಡವರ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಬೆನ್ನಿಗೆ ಚೂರಿ ಹಾಕುವವರನ್ನು ನಾನು ನಂಬುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರು, ಒಂದು ಬಾರಿ ಪಕ್ಷ ಸೇರಿದ ಮೇಲೆ ಯಾರು ಮೂಲ, ವಲಸಿಗರು ಎನ್ನುವ ಮಾತು ಬರುವುದಿಲ್ಲ. ಉಮೇಶ್ ಜಾಧವ್, ದೇವೇಂದ್ರಪ್ಪ ಹಾಗೂ ಎ.ಮಂಜು ಅವರು ಕಾಂಗ್ರೆಸ್ಸಿನಲ್ಲಿದ್ದವರು. ಬಿಜೆಪಿಗೆ ಅರ್ಜಿ ಹಾಕಿದ ಅವರಿಗೆ ಟಿಕೆಟ್ ಕೊಡಲಾಗಿದೆ. ಪಕ್ಷದ ನಿರ್ಧಾರಗಳಿಗೆ ಪ್ರತಿಯೊಬ್ಬರು ಬದ್ಧವಾಗಿರಬೇಕು. ಅದನ್ನಷ್ಟೇ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಮಂಡ್ಯ ಲೋಕಸಭಾ ಚುನಾವಣೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಕಾಂಗ್ರೆಸ್‍ನ ಮುಖಂಡರು, ಕಾರ್ಯಕರ್ತರು ಹಾಜರಿರಬೇಕು. ನಾವೆಲ್ಲ ಸೇರಿಯೇ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಹೀಗಾಗಿ ಎರಡೂ ಪಕ್ಷದ ಮುಖಂಡರು ಒಮ್ಮತದಿಂದ ಇರಬೇಕು. ಯಾವುದೇ ಸಮಸ್ಯೆ ಇದ್ದರೂ ಬದಿಗೊತ್ತಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಸಿ.ಪಿ.ಯೋಗೇಶ್ವರ್ ಆದರೂ ನಿಲ್ಲಲಿ. ಇಲ್ಲವೇ ಅವರ ಮಗಳಾದರೂ ಸ್ಪರ್ಧಿಸಲಿ. ಅವರ ಮಗಳು ನನಗೂ ಮಗಳೇ. ಯಾರೇ ಸ್ಪರ್ಧಿಸಿದರೂ ಅದಕ್ಕೆ ನನ್ನ ಸ್ವಾಗತವಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಜನರಿಗೆ ಎಲ್ಲವೂ ಗೊತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ನೀತಿಗಳಿಂದ ಜನರು ಸಂಕಷ್ಟದಲ್ಲಿದ್ದಾರೆ. ಜಿಎಸ್‍ಟಿಯಿಂದ ಎಷ್ಟು ಹೊಡೆತ ಬಿದ್ದಿದೆ ಗೊತ್ತಿದೇಯಾ? ನೀವು ವ್ಯಾಪಾರಿಗಳಾಗಿದ್ದರೆ ಅದರ ಕಷ್ಟ ಅರ್ಥವಾಗುತ್ತದೆ. ಮೋದಿ ಅವರು ಐದು ವರ್ಷಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ? ಯುವಕರು ಉದ್ಯೋಗವಿಲ್ಲದೆ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.