– ಸಕ್ಕರೆ ನಾಡಲ್ಲಿ ರಂಗೇರಿದ ಕಣ
– ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪೋಸ್ಟ್
ಬೆಂಗಳೂರು: ರಾಜಹುಲಿ ಬಂದರೂ ಅಷ್ಟೇ, ಐರಾವತ ಬಂದರೂ ಅಷ್ಟೇ, ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್ ಕುಮಾರಸ್ವಾಮಿನೇ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಟಾರ್ ವಾರ್ ಶುರುಮಾಡಿದ್ದಾರೆ.
ಹೌದು, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಸಕ್ಕರೆ ನಾಡಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಸುಮಲತಾ, ಯಶ್, ದರ್ಶನ್ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಮಂಡ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ವರ್ಸಸ್ ಸ್ಯಾಂಡಲ್‍ವುಡ್ ಸ್ಟಾರ್ ವಾರ್ ಶುರುವಾಗಿದೆ. ಫೇಸ್‍ಬುಕ್, ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪರಸ್ಪರ ಪೋಸ್ಟ್ ಹಾಕುತ್ತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ದರ್ಶನ್ ದೊಡ್ಡ ಮಗ, ಯಶ್ ಚಿಕ್ಕಮಗ ಎಂದಿದ್ದ ಸುಮಲತಾ ಹೇಳಿಕೆಗೆ ಜೆಡಿಎಸ್ ಹಾಗೂ ನಿಖಿಲ್ ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. ದರ್ಶನ್ ದೊಡ್ಡ ಮಗ, ಯಶ್ ಚಿಕ್ಕ ಮಗನಾದರೇ ಅಭಿಷೇಕ್ ಯಾರು ಎಂದು ಪೋಸ್ಟ್ ನಲ್ಲಿ ಪ್ರಶ್ನಿಸಿ ಎಂದು ಟೀಕಿಸುತ್ತಿದ್ದಾರೆ.
ಜೆಡಿಎಸ್ ಚನ್ನಪಟ್ಟಣ, ನಿಖಿಲ್ ಕುಮಾರಸ್ವಾಮಿ ಎಂಪಿ ಹೀಗೆ ಹಲವು ಫೇಸ್‍ಬುಕ್ ಖಾತೆಯಿಂದ ಸುಮಲತಾ ಅವರ ವಿರುದ್ಧ ಪೋಸ್ಟ್ ಮಾಡಲಾಗುತ್ತಿದೆ. ಮಂಡ್ಯ ಜನರ ಕಷ್ಟಕ್ಕೆ ಬರೋದು ಜೆಡಿಎಸ್ ಹೊರತು ನಟರಲ್ಲ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.