ಬಿಜೆಪಿ ಸೋಲಿಸಲು ಕಾಂಗ್ರೆಸ್ ಅವಶ್ಯಕತೆ ನಮಗಿಲ್ಲ: ಮಾಯಾವತಿ

Public TV
1 Min Read
Mayawati Sonia Rahul

ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಸ್‍ಪಿ-ಬಿಎಸ್‍ಪಿ ಮೈತ್ರಿ ಸಾಕು. ದೇಶದಲ್ಲಿ ಕಾಂಗ್ರೆಸ್ ಮೈತ್ರಿಯ ಅವಶ್ಯಕತೆ ನಮಗಿಲ್ಲ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಸ್ಪಷ್ಟ ಸಂದೇಶವನ್ನು ಕೈ ನಾಯಕರಿಗೆ ರವಾನಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 7 ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲ ಕಡೆಯೂ ಸ್ಪರ್ಧೆ ಮಾಡಲಿದೆ ಎಂದು ಕಾಂಗ್ರೆಸ್ ಭಾನುವಾರ ತಿಳಿಸಿತ್ತು. ಸಮಾಜವಾದಿ ಪಾರ್ಟಿ, ಬಹುಜನ ಸಮಾಜವಾದಿ ಪಾರ್ಟಿ ಮತ್ತು ರಾಷ್ಟ್ರೀಯ ಲೋಕ್ ದಳ ಪಕ್ಷಗಳ ಮುಖಂಡರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ.

Mayawati Sonia

ಕಾಂಗ್ರೆಸ್ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಮಾಯಾವತಿ, ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ಕಾಂಗ್ರೆಸ್ ಮುಕ್ತವಾಗಿದೆ. ನಮ್ಮ ಮೈತ್ರಿಯೊಂದೇ ಬಿಜೆಪಿಯನ್ನು ಸೋಲಿಸುವ ಸಾಮಾರ್ಥ್ಯವನ್ನು ಹೊಂದಿದ್ದು, ಕಾಂಗ್ರೆಸ್ ಅವಶ್ಯಕತೆ ನಮಗಿಲ್ಲ. 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸದಂತೆ ನಾವು ಯಾವುದೇ ಒತ್ತಡ ಹಾಕಿಲ್ಲ. ಈ ಕುರಿತು ಹರಡುತ್ತಿರುವ ಸುದ್ದಿಗಳು ಸುಳ್ಳು. ದೇಶದಲ್ಲಿ ಎಲ್ಲಿಯೂ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಲ್ಲ ಎಂದು ಮಾಯಾವತಿ ಅವರು ಟ್ವೀಟ್ ಮೂಲಕ ಖಚಿತಪಡಿಸಿದರು.

Mayawati sonia kc venugopa rahul

ಕಾರ್ಯಕರ್ತರ ಇಚ್ಛೆಯ ಮೇರೆಗೆ ಕಾಂಗ್ರೆಸ್ ನೊಂದಿಗೆ ನಾವು ಯಾವ ಕ್ಷೇತ್ರದಲ್ಲಿಯೂ ಮೈತ್ರಿ ಮಾಡಿಕೊಂಡಿಲ್ಲ. ನಮ್ಮದು ಕೇವಲ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಮತದಾರರು ಊಹಾಪೋಹ ಸುದ್ದಿಗಳತ್ತ ಗಮನ ನೀಡಬೇಡಿ ಎಂದು ಮಾಯಾವತಿ ಮನವಿ ಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ 38, ಎಸ್‍ಪಿ 37 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ. ರಾಷ್ಟ್ರೀಯ ಲೋಕ್ ದಳ ಪಕ್ಷಕ್ಕೆ ಮಥುರಾ, ಮುಜಾಫರ್ ನಗರ ಮತ್ತು ಬಾಗಪಥ್ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅಮೇಥಿ ಮತ್ತು ಕೈ ಅಧಿನಾಯಕಿ ಸೋನಿಯಾ ಗಾಂಧಿ ಅವರ ರಾಯ್ ಬರೇಲಿ ಕ್ಷೇತ್ರದಿಂದ್ದ ಮೈತ್ರಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *