ಬೆಂಗಳೂರು: ನಟಿ ವಿಜಯಲಕ್ಷ್ಮಿ ಮತ್ತು ಸೋದರಿ ಉಷಾದೇವಿ ವಿರುದ್ಧ ನಟ ರವಿ ಪ್ರಕಾಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ದೂರು ದಾಖಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರವಿ ಪ್ರಕಾಶ್, ಚಿಕಿತ್ಸೆಗಾಗಿ 50 ಸಾವಿರ ರೂ. ಹಣ ಬೇಕೆಂದು ವಿಜಯಲಕ್ಷ್ಮಿ ಸೋದರಿ ಉಷಾ ದೇವಿ ನನ್ನ ಬಳಿ ಕೇಳಿಕೊಂಡಿದ್ದರು. ಆಸ್ಪತ್ರೆಯಿಂದ ಹೊರಬಂದ ಮೇಲೆಯೂ ಕೆಲ ದಿನ ಕೆಲಸ ಮಾಡೋದಕ್ಕೆ ಆಗಲ್ಲ ಎಂದು ಹೇಳಿದಕ್ಕೆ 1 ಲಕ್ಷ ರೂ. ಸಹಾಯ ಮಾಡಿದ್ದೆ. ಆರೋಗ್ಯ ವಿಚಾರಿಸಲು ಕೆಲವು ಬಾರಿ ಫೋನ್ ಮಾಡಿದ್ದು, ಆಸ್ಪತ್ರೆಯಲ್ಲಿಯೂ ನನ್ನ ತಂಗಿ, ಬಾವನೊಂದಿಗೆ ಹೋಗಿ ಭೇಟಿಯಾಗಿದ್ದೇನೆ. ಸಹಾಯ ಪಡೆದ ಮೇಲೆ ಕೆಟ್ಟ ಪದಗಳನ್ನು ಬಳಕೆ ಮಾಡಿ ನನ್ನನ್ನು ನಿಂದಿಸುತ್ತಿದ್ದಾರೆ. ಹಾಗಾಗಿ ನಾನು ನೀಡಿರುವ ಹಣ ವಾಪಸ್ ಕೊಟ್ಟು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ದೂರಿನಲ್ಲಿ ನಮೂದಿಸಿದ್ದೇನೆ ಎಂದು ತಿಳಿಸಿದರು.
ಇತ್ತ ವಿಜಯಲಕ್ಷ್ಮಿ ಮತ್ತು ಉಷಾದೇವಿ ನಗರದ ಪುಟ್ಟೇನಹಳ್ಳಿಯಲ್ಲಿ ರವಿಪ್ರಕಾಶ್ ವಿರುದ್ಧ ಮೌಖಿಕವಾಗಿ ದೂರು ಸಲ್ಲಿಸಿದ್ದರು. ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸರು ರವಿ ಪ್ರಕಾಶ್ ರನ್ನು ಕರೆಸಿ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇತ್ತ ರವಿ ಪ್ರಕಾಶ್ ಸಹ ಶನಿವಾರ ಸಂಜೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಯದೇವ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ವಿಜಯಲಕ್ಷ್ಮಿ ಬನ್ನೇರುಘಟ್ಟ ರಸ್ತೆಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv