ವಿಜಯಪುರ: ಮಾಜಿ ಸಿಎಂ ಯಡ್ಡಿಯೂರಪ್ಪನವರ ಹುಣ್ಣಿಮೆ, ಅಮವಾಸ್ಯೆ, ದೀಪಾವಳಿ, ಸಂಕ್ರಾಂತಿ ಎಲ್ಲ ಮುಗಿದಿವೆ. ಈ ರೀತಿ ಅನೇಕ ಡೆಡ್ ಲೈನ್ ಮುಗಿದರೂ ಕಾಂಗ್ರೆಸ್ ಇರುತ್ತೆ ಎಂದು ಜಿಲ್ಲೆಯ ಕಳ್ಳಕವಟಿಗಿಯಲ್ಲಿ ಗೃಹ ಸಚಿವ ಎಂ.ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡ್ಡಿಯೂರಪ್ಪನವರ ಹುಣ್ಣಿಮೆ, ಅಮವಾಸ್ಯೆ, ದೀಪಾವಳಿ, ಸಂಕ್ರಾಂತಿ ಅಂತ ಎಲ್ಲಾ ಡೆಡ್‍ಲೈನ್ ಮುಗಿದಿದೆ. ಅವರು ಆಪರೇಷನ್ ಕಮಲ ಮಾಡೋದು ಬಿಡಲ್ಲ. ಪದೇ ಪದೇ ಅದೇ ಮಾತನ್ನ ಕೇಳಿ ನಿಮಗೂ ಬೇಸರ ಆಗಿದೆ. ಮುಂದೆ ಅಸೆಂಬ್ಲಿ ಚುನಾವಣೆ ಬರುತ್ತೆ, ನಂತರ ಲೋಕಸಭಾ ಚುನಾವಣೆ ಬರುತ್ತೆ. ಆಗಲು ಕಾಂಗ್ರೆಸ್ ಇರುತ್ತೆ ಆಪರೇಷನ್ ಕಮಲ ನಡೆಯಲ್ಲ ಎಂದು ಯಡ್ಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದ್ದಾರೆ.
ದೋಸ್ತಿ ಸರ್ಕಾರದಲ್ಲಿ ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿ, ಎಂಪಿ ಸ್ಥಾನದ 12 ಸೀಟುಗಳಿಗೆ ಯಾವುದೇ ಸಮಸ್ಯೆ ಇಲ್ಲ. ಈಗಾಗಲೇ ಜೆಡಿಎಸ್ 2, ಕಾಂಗ್ರೆಸ್‍ನ 10 ಸೀಟುಗಳ ಬಗ್ಗೆ ಯಾವುದೇ ಗೊಂದಲವಿಲ್ಲ. ಉಳಿದ 16 ಸೀಟ್‍ಗಳ ಬಗ್ಗೆ ಗುರುವಾರ ಚರ್ಚೆ ಆಗಿದೆ. ದೆಹಲಿಯಲ್ಲಿ ಮಾರ್ಚ್ 11ಕ್ಕೆ ಮೀಟಿಂಗ್ ಇದೆ. ಅಲ್ಲಿಯೇ ಎಲ್ಲವೂ ತೀರ್ಮಾನ ಆಗುತ್ತದೆ. 2014 ಹಾಗೂ 2018 ರ ವಿಜಯಪುರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಂದಿತ್ತು. ವಿಜಯಪುರ ನಮಗೆ ಬೇಕು ಎಂದು ನಾನು, ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ್ ಹೈಕಮಾಂಡ್‍ಗೆ ಮನವಿ ಮಾಡಿದ್ದೇವೆ ಎಂದರು.
ಸುಮಲತಾ ಅವರ ಬಗ್ಗೆ ನಾನು ಮಾತನಾಡಲ್ಲ. ಬಹುತೇಕ ಮಂಡ್ಯ ಸೀಟ್ ಜೆಡಿಎಸ್ ಪಾಲಾಗಿದೆ. ಹಾಗಾಗಿ ಅದರ ಬಗ್ಗೆ ನಾನು ಹಸ್ತಕ್ಷೇಪ ಮಾಡಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲೋದರ ಬಗ್ಗೆ ನಾನು ಮಾತನಾಡಲ್ಲ ಎಂದು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv