– ಇಲಾಖೆಯಿಂದ ಐಡಿ ಕಾರ್ಡ್ ಭರವಸೆ
ಧಾರವಾಡ: ಸಾಮಾನ್ಯವಾಗಿ ನೀವು ಪೊಲೀಸರು ಗಸ್ತು ತಿರುಗುತ್ತಿರುವ ಬಗ್ಗೆ ಕೇಳಿದ್ದೀರಿ. ಪ್ರತಿದಿನ ರಾತ್ರಿ ಪೊಲೀಸರು ಗಸ್ತು ತಿರುಗುವುದು ಸರ್ವೇ ಸಾಮಾನ್ಯ ಕೂಡಾ. ಆದರೆ ಧಾರವಾಡದಲ್ಲಿ ಪೊಲೀಸರ ಜೊತೆ ಸಾರ್ವಜನಿಕರು ಕೂಡ ಗಸ್ತು ತಿರುಗುತ್ತಾರೆ.
ಹೌದು.. ಇಂತಹ ಹೊಸ ಗಸ್ತು ನಿಮಯವನ್ನು ಪೊಲೀಸರು ಆರಂಭ ಮಾಡಿದ್ದಾರೆ. ಕಳ್ಳತನ ಹಾಗೂ ರಾತ್ರಿ ನಡೆಯುವ ಅನೈತಿಕ ಚಟುವಟಿಕೆ ತಡೆಗಟ್ಟಲು ಈ ಹೊಸ ಬೀಟ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಆರಂಭ ಮಾಡಿದೆ. ಸೈಕಲ್ ಇರುವ ಕೆಲ ಸೈಕ್ಲಿಸ್ಟ್ ಗಳು ಇವರ ಜೊತೆ ಕೈ ಜೋಡಿಸಿದರೆ, ಇನ್ನೊಂದು ಕಡೆ ಕೆಲ ಯುವಕರು ಕೂಡ ನಡೆದಾಡುತ್ತಲೇ ಗಸ್ತು ತಿರುಗುತ್ತಿದ್ದಾರೆ. ಪ್ರತಿ ದಿನ ರಾತ್ರಿ ಸುಮಾರು 12 ಗಂಟೆಗೆ ಈ ಗಸ್ತು ಆರಂಭ ಮಾಡಿ, ಬೆಳಗ್ಗಿನ ಜಾವ 3 ರಿಂದ 4.00 ಗಂಟೆಯವರೆಗೆ ಗಸ್ತು ತಿರುಗಲಾಗುತ್ತಿದೆ.
ಪ್ರತಿದಿನ ಒಂದು ಬಡಾವಣೆಯಲ್ಲಿ ಓಡಾಡುವ ಈ ಗಸ್ತು ತಂಡಕ್ಕೆ ಮುಂದಿನ ದಿನಗಳಲ್ಲಿ ಐಡಿ ಕಾರ್ಡ್ ಕೂಡ ಮಾಡಿಸಿಕೊಡುವ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿದೆ. ಸದ್ಯಕ್ಕೆ 50ಕ್ಕೂ ಹೆಚ್ಚು ಸೈಕ್ಲಿಸ್ಟ್ ಗಳು ಇದಕ್ಕೆ ಕೈ ಜೋಡಿಸಿದ್ದಾರೆ. ಅವರಲ್ಲಿ ಕೆಲವರು ವೈದ್ಯರು ಹಾಗೂ ಸರ್ಕಾರಿ ನೌಕರರು ಕೂಡ ಇದ್ದಾರೆ. ಇದರಿಂದ ನಾವು ಇಲ್ಲಿ ನಡೆಯುವ ಕಳ್ಳತನವನ್ನು ತಡೆಗಟ್ಟಬಹುದು. ಈ ಮೂಲಕ ಸಾರ್ವಜನಿಕರು ಮತ್ತು ಪೊಲೀಸರು ಒಟ್ಟಿಗೆ ಸೇರಿದರೆ ಏನು ಬೇಕಾದ್ರೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದೇವೆ ಎಂದು ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಮುರುಗೇಶ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv