ಬೀಜಿಂಗ್: ವಿಶ್ವದಲ್ಲಿ ಭಿಕ್ಷೆ ಬೇಡುತ್ತಿರುವ ಪಾಕಿಸ್ತಾನ ಚೀನಾದ ದೌರ್ಬಲ್ಯದಿಂದ ಭಾರತದ ವಿರುದ್ಧ ಕಷ್ಟಪಟ್ಟು ತೊಡೆ ತಟ್ಟುತ್ತಿದೆ.
ಹೌದು. ವಿವಿಧ ಕಾರಣಗಳಿಂದಾಗಿ ಈಗ ಚೀನಾ ಪಾಕಿಸ್ತಾನದ ಸೇನೆಯ ಮೇಲೆ ಹೆಚ್ಚು ಅವಲಂಬನೆಯಾಗಿದೆ. ಚೀನಾ-ಪಾಕಿಸ್ತಾನ ಆರ್ಥಿಕ ವಲಯ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚೀನಾ ನಾಗರಿಕರು ಕೆಲಸ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 60 ಸಾವಿರ ಚೀನಿಯರು ಪಾಕಿಸ್ತಾನಿದಲ್ಲಿದ್ದಾರೆ.
ಇದರ ಜೊತೆಯಲ್ಲಿ ಪಾಕಿಸ್ತಾನ ಸೇನೆಯ ಅಗತ್ಯ ಚೀನಾಕ್ಕಿದೆ. ದಕ್ಷಿಣ ಚೀನಾದ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಗಡಿ ದಾಟದಂತೆ ತಡೆಯಲು ಚೀನಾಗೆ ಪಾಕ್ ಸೇನೆಯ ಬೆಂಬಲ ಬೇಕು. ಈ ಹಿಂದೆ ಕ್ಸಿನ್‍ಜಿಯಾಂಗ್ ಪ್ರತ್ಯೇಕವಾದಿ ಉಗ್ರರು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಮೂಲದ ಭಯೋತ್ಪಾದಕರ ಸಹಾಯ ಪಡೆದಿದ್ದರು. ಹೀಗಾಗಿ ಗಡಿ ಭಾಗದಲ್ಲಿ ಶಾಂತಿ ಕಾಪಾಡಿಕೊಳ್ಳುವ ಸಲುವಾಗಿ ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಯಲ್ಲಿ ಚೀನಾ ಸರ್ಕಾರ ಕೋಟಿಗಟ್ಟಲೇ ಹಣವನ್ನು ಚೀನಾ ಸುರಿದಿದೆ. ಏಷ್ಯಾದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಸಡ್ಡು ಹೊಡೆಯಲೆಂದೇ ಈ ಯೋಜನೆಗೆ ಚೀನಾ ಚಾಲನೆ ನೀಡಿದೆ. ಈ ಯೋಜನೆ ಪೂರ್ಣವಾಗಬೇಕಾದರೆ ಪಾಕ್ ಸಹಕಾರ ಬೇಕೇ ಬೇಕು.
ನೆರೆಯ ರಾಷ್ಟ್ರಗಳ ಶಸ್ತ್ರಪಡೆಯ ಮನಸ್ಥಿತಿ ಅರಿಯಲು ಪಾಕಿಸ್ತಾನದ ಸೇನೆಯಲ್ಲಿ ತನ್ನದೇ ಆದ ಮೂಲಗಳನ್ನು ಚೀನಾ ಹೊಂದಿದೆ. ಉಭಯ ದೇಶಗಳ ಸೈನ್ಯದ ಉನ್ನತ ಅಧಿಕಾರಿಗಳು ನಿತ್ಯವೂ ಭೇಟಿಯಾಗಿ ಮಾತುಕತೆ ನಡೆಸುತ್ತಾರೆ. ಜಂಟಿ ಸಮರ ಅಭ್ಯಾಸ ನಡೆಸುವ ಜೊತೆಗೆ ಚೀನಾ ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳನ್ನು ಸಹ ನೀಡಿದೆ. ಈ ಕಾರಣಕ್ಕಾಗಿ ಪಾಕಿಸ್ತಾನ ಚೀನಾದ ಮೇಲೆ ಒತ್ತಡ ತಂದು ತನ್ನ ಪರವಾಗಿಯೇ ಹೇಳಿಕೆ ನೀಡುವಂತೆ ಮಾಡುತ್ತಿದೆ.
ಇದೇ ಕಾರಣಕ್ಕೆ ಬುಧವಾರ ನಡೆದಿದ್ದ ರಷ್ಯಾ-ಭಾರತ- ಚೀನಾ (ಆರ್‌ಐಸಿ) ಸಭೆಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಪಾಕಿಸ್ತಾದವು ಭಯೋತ್ಪಾದನೆಯ ವಿರೋಧಿ ದೇಶವಾಗಿದೆ ಎಂದು ಹೇಳಿಕೆ ನೀಡಿದ್ದರು. ಆರ್‌ಐಸಿ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನ ಹಾಗೂ ಭಯೋತ್ಪಾದಕರಿಂದ ನಾವು ಎಂದಿಗೂ ಮಾನವೀಯತೆಯನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಉಗ್ರರನ್ನು ಸೆದೆ ಬಡಿಯಲು ವಿಶ್ವದ ರಾಷ್ಟ್ರಗಳು ಒಂದಾಗಿ ಹೋರಾಡಬೇಕಿದೆ ಎಂದು ಹೇಳಿದ್ದರು. ಇದರಿಂದ ಎಚ್ಚೆತ್ತುಕೊಂಡ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾದ ಪರ ಬ್ಯಾಟ್ ಬೀಸಿದ್ದರು. ಅಷ್ಟೇ ಅಲ್ಲದೆ ಪಾಕಿಸ್ತಾನ ಹಾಗೂ ಭಾರತ ನಮಗೆ ಆತ್ಮೀಯ ದೇಶಗಳು. ಪರಸ್ಪರ ಮಾತುಕತೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಪುಲ್ವಾಮಾ ದಾಳಿಯ ತನಿಖೆಗೆ ಉಭಯ ದೇಶಗಳು ಸಹಕಾರ ನೀಡುವ ಮೂಲಕ ಶಾಂತಿ ಹಾಗೂ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv