ದೇಶ ಸುರಕ್ಷಿತರ ಕೈಯಲ್ಲಿದೆ, ದೇಶಕ್ಕಿಂತ ದೊಡ್ಡದು ಏನಿಲ್ಲ: ವಾಯು ದಾಳಿ ಬಳಿಕ ಮೋದಿ ಮೊದಲ ಭಾಷಣ

Public TV
2 Min Read
modi a

ಜೈಪುರ: ಪಕ್ಷಕ್ಕಿಂತಲೂ ದೇಶ ದೊಡ್ಡದು. ದೇಶಕ್ಕಿಂತ ದೊಡ್ಡದು ಏನಿಲ್ಲ. ಈ ಮಣ್ಣಿನಾಣೆಗೂ ದೇಶಕ್ಕೆ ಹಾನಿಯಾಗಲು ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಾಕ್ ಮೇಲೆ ವಾಯು ದಾಳಿ ನಡೆದ ಬಳಿಕ ಪ್ರಧಾನಿ ಮೋದಿ ಇಂದು ರಾಜಸ್ಥಾನದ ಚುರುವಿನಲ್ಲಿ ಬಿಜೆಪಿಯ ಸಮಾವೇಶದಲ್ಲಿ ಮಾತನಾಡಿದರು. ಇಂದು ನಿಮ್ಮೆಲ್ಲರ ಜೋಶ್ ನನಗೆ ಅರ್ಥವಾಗುತ್ತಿದೆ. ಇಂದು ನಮ್ಮ ದೇಶ ಸುರಕ್ಷಿತವಾಗಿದ್ದು, ಸುರಕ್ಷಿತರ ಕೈಯಲ್ಲಿದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ ಎಂದರು.

2014ರಲ್ಲಿ ಮೊದಲ ಬಾರಿಗೆ ನನ್ನ ಹೃದಯದ ಮಾತನ್ನು ನಿಮ್ಮ ಮುಂದೆ ಹೇಳಿದ್ದೆ. ಇಂದು ಇನ್ನೊಮ್ಮೆ 2014ರ ನನ್ನ ಮಾತುಗಳನ್ನು ನಿಮ್ಮ ಮುಂದೆ ಹೇಳುತ್ತೇನೆ. ದೇಶಕ್ಕಿಂತ ದೊಡ್ಡದು ಏನಿಲ್ಲ. ಈ ಮಣ್ಣಿನಾಣೆಗೂ ದೇಶಕ್ಕೆ ಹಾನಿಯಾಗಲು ಬಿಡಲ್ಲ. ನಾನು ಯಾವತ್ತು ದೇಶ ತಲೆ ತಗ್ಗಿಸುವ ಕೆಲಸ ಮಾಡಲ್ಲ ಎಂದು ಈ ಭಾರತದ ಪ್ರಧಾನ ಸೇವಕನಾದ ನಾನು ಚುರು ಭೂಮಿಯಲ್ಲಿ ಭಾರತ ಮಾತೆಗೆ ವಾಗ್ದಾನ ಮಾಡುತ್ತೇನೆ ಎಂದು ಹೇಳಿದರು.

ಒನ್ ರ‍್ಯಾಂಕ್ ಒನ್ ಪೆನ್ಷನ್ (ಏಕ ಶ್ರೇಣಿ ಏಕ ಪಿಂಚಣಿ) ಜಾರಿ ಮಾಡಿದ್ದೇವೆ. ನಿನ್ನೆ ಸೈನಿಕರ ನೆನಪಿಗಾಗಿ ಸ್ಮಾರಕವನ್ನು ಅರ್ಪಿಸಲಾಗಿದೆ. ಎರಡು ದಿನಗಳ ಹಿಂದೆ ರೈತರಿಗಾಗಿ ಆರಂಭಿಸಿದ ಯೋಜನೆಯನ್ನು ಬಾಬಾ ಗೊರಖಪುರನಾಥನ ಆಶೀರ್ವಾದದೊಂದಿಗೆ ಪಿಎಂ ಕಿಸಾನ್ ಮಹತ್ವದ ಯೋಜನೆಯನ್ನು ಉತ್ತರ ಪ್ರದೇಶದಲ್ಲಿ ಆರಂಭಿಸಲಾಗಿದೆ. ಅಂದು ಒಂದು ಬಟನ್ ಒತ್ತುವ ಮೂಲಕ 12 ಕೋಟಿಗೂ ಅಧಿಕ ಸಣ್ಣ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ. ಎರಡು ದಿನದ ಹಿಂದೆ ಯೋಜನೆಯ ಮೊದಲ ಕಂತು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಚುರುವಿನಲ್ಲಿ 50 ಲಕ್ಷಕ್ಕೂ ಅಧಿಕ ರೈತರಿಗೆ ಈ ಯೋಜನೆಯ ಲಾಭ ಸಿಗಲಿದೆ. ಆದ್ರೆ ಇದೂವರೆಗೂ ರಾಜಸ್ಥಾನದ ಯಾವ ರೈತರಿಗೂ ಹಣ ಜಮೆ ಆಗಿಲ್ಲ ಎಂದು ಹೇಳಲು ನನಗೆ ದುಃಖವಾಗುತ್ತಿದೆ. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಸರ್ಕಾರಗಳು ರೈತರ ದತ್ತಾಂಶಗಳನ್ನು ನೀಡಿದ್ದರಿಂದ ಹಣ ವರ್ಗಾವಣೆಯಾಯ್ತು. ಆದ್ರೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ರೈತರ ದತ್ತಾಂಶ ನೀಡಲು ಹಿಂದೇಟು ಹಾಕುತ್ತಿದೆ. ರೈತರ ವಿಷಯದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರ ನೀಡಿರುವ ಹಣದಿಂದ ರೈತರಿಗೆ ಸಹಾಯವಾಗಲಿದೆ. ರೈತರಿಗಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಇಲ್ಲಿಯ ಸರ್ಕಾರ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸೇರ್ಪಡೆಯಾಗುತ್ತಿಲ್ಲ. ಕಾಂಗ್ರೆಸ್ ರಾಜಕೀಯ ಏನಿದ್ರೂ, ನಾವು ಮಾತ್ರ ರೈತರಿಗೆ ಹಣ ಮುಟ್ಟಿಸಿಯೇ ತೀರುತ್ತೇನೆ ಎಂದು ಮೋದಿ ವಾಗ್ದಾನ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *