60 ವರ್ಷಗಳ ಕನಸು ನನಸು – ಲೋಕಾರ್ಪಣೆಗೊಳ್ಳಲಿದೆ ಯುದ್ಧ ಸ್ಮಾರಕ : ವಿಶೇಷತೆ ಏನು?

Public TV
2 Min Read
War Memorial

ನವದೆಹಲಿ: ದೇಶದ 60 ವರ್ಷಗಳ ಕನಸು ನನಸಾಗುತ್ತಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ಸೋಮವಾರ ಉದ್ಘಾಟನೆಗೊಳ್ಳಲಿದ್ದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಮೂಲಕ ಕೇಂದ್ರದ ಮೋದಿ ಸರ್ಕಾರ ದೇಶದ 26 ಸಾವಿರ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಿದೆ.

ನವದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಿಸಲಾಗಿರುವ ಈ ಸ್ಮಾರಕ ದೇಶದ ಮೊದಲ ವಾರ್ ಮ್ಯೂಸಿಯಂ ಆಂಡ್ ಮೆಮೋರಿಯಲ್ ಆಗಿದ್ದು ದೇಶಕ್ಕಾಗಿ ಹೋರಾಡಿ ಮಡಿದ ಯೋಧರಿಗೆ ಇದನ್ನು ಸಮರ್ಪಿಸಲಾಗುತ್ತದೆ.

War Memorial 1.

ಸುಮಾರು 176 ಕೋಟಿ ರೂಪಾಯಿ ವೆಚ್ಚದಲ್ಲಿ ಹೈದರಾಬಾದ್ ಕಂಪನಿಯೊಂದು ಈ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು ಉನ್ನತ ತಂತ್ರಜ್ಞಾನ ಮತ್ತು ಹಲವು ವಿಶೇಷತೆಗಳಿಂದ ಮ್ಯೂಸಿಯಂ ಕಟ್ಟಲಾಗಿದೆ. ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ಸಮಾನಾಂತರವಾಗಿ ಮ್ಯೂಸಿಯಂ ನಿರ್ಮಾಣವಾಗಿದ್ದು ಈ ಎರಡು ಪ್ರದೇಶಗಳಲ್ಲಿ ನಿಂತರೂ ವಾರ್ ಮ್ಯೂಸಿಯಂನ ಅಮರ್ ಜವಾನ್ ಜ್ಯೋತಿಯ ಅಶೋಕ ಸ್ತಂಭ ಕಾಣಲಿದೆ.

ವಿಶೇಷತೆ ಏನು?
ಸ್ಮಾರಕದ ಒಳ ಭಾಗದಲ್ಲಿ ನಾಲ್ಕು ಸಮಾನಾಂತರ ವೃತ್ತಗಳನ್ನು ನಿರ್ಮಿಸಿದ್ದು ಅಮರ ಚಕ್ರ, ವೀರ ಚಕ್ರ, ತ್ಯಾಗ ಚಕ್ರ ಹಾಗೂ ಸುರಕ್ಷ ಚಕ್ರ ಎಂದು ಹೆಸರಿಡಲಾಗಿದೆ. ಈ ನಾಲ್ಕು ಚಕ್ರದಲ್ಲಿ ದೇಶಕ್ಕಾಗಿ ಮಡಿದ ಭೂ ಸೇನೆಯ 25,539 ವಾಯುಸೇನೆಯ 164 ಹಾಗೂ ನೌಕಾಪಡೆಯ 239 ಯೋಧರ ಹೆಸರನ್ನು ಕೆತ್ತಲಾಗಿದೆ.

War Memorial 2

ಈ ನಾಲ್ಕು ವೃತ್ತಗಳಲ್ಲಿ ಮುಂದಿನ 30 ವರ್ಷಕ್ಕೆ ಹುತಾತ್ಮ ಸೈನಿಕರ ಹೆಸರು ಕೆತ್ತಲು ಸ್ಥಳವನ್ನು ಮೀಸಲಿಡಲಾಗಿದೆ. ಮುಂದಿನ 60 ವರ್ಷಗಳ ಕಾಲ ಹುತಾತ್ಮ ಯೋಧರ ಹೆಸರು ಕೆತ್ತಲು ಪ್ರತ್ಯೇಕ ವೃತ್ತ ನಿರ್ಮಾಣ ಮಾಡಲಾಗಿದೆ. ಪರಮ ವೀರ ಚಕ್ರ ಪಡೆದ ಯೋಧರ ಹೆಸರುಗಳನ್ನು ಪ್ರತ್ಯೇಕವಾಗಿ ಕೆತ್ತಲಾಗಿದೆ. ಗ್ರಾನೈಟ್ ಕಲ್ಲಿನಿಂದ ಹುತಾತ್ಮ ಯೋಧರ ಪ್ರತಿಮೆಗಳನ್ನು ನಿರ್ಮಿಸಿದ್ದು ಮರಳುಗಲ್ಲಿನಿಂದ ಅವುಗಳನ್ನು ಕೋಟ್ ಮಾಡಲಾಗಿದೆ.

14 ಲಕ್ಷ ಲೀಟರ್ ಅಂತರ್ಜಲ ಶೇಖರಣಾ ವ್ಯವಸ್ಥೆ ಮಾಡಿದ್ದು ಮರಳುಗಲ್ಲು ತಣ್ಣಗೆ ಹಾಗೂ ಸುತ್ತಲಿನ ಹಸಿರು ಒಣಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹುತಾತ್ಮ ಯೋಧರ ಹೆಸರಿನ ಹುಡುಕಾಟಕ್ಕಾಗಿ ಡಿಜಿಟಲ್ ಸರ್ಚಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ವಿನ್ಯಾಸಕ ಶ್ರೀರಾಮ್ ಸುತಾರ್ ಮ್ಯೂಸಿಯಂನಲ್ಲಿ ಆರು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *