ಬಾಗಲಕೋಟೆ: ಟಂಟಂ ಪಲ್ಟಿಯಾದ ಪರಿಣಾಮ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪತಿ ಗಾಯಗೊಂಡಿರುವ ಘಟನೆ ಜಿಲ್ಲೆಯ ನವನಗರದ ಸೆಕ್ಟರ್ ನಂಬರ್ 1ರ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಅನ್ನಪೂರ್ಣ ವಾಲಿಕಾರ(42) ಮೃತ ದುರ್ದೈವಿ. ಮಹಿಳೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೆನಸಬಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತ ಮಹಿಳೆಯ ಪತಿ ಗಿರಿಯಪ್ಪ ವಾಲಿಕಾರ(48) ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅನ್ನಪೂರ್ಣ ಮತ್ತು ಗಿರಿಯಪ್ಪ ವಾಲಿಕಾರ ಟಂಟಂ ನಲ್ಲಿ ಹೋಗಿದ್ದರು. ಆದರೆ ಎದುರಿಗೆ ಬರುತ್ತಿದ್ದ ಕಾರು ತಪ್ಪಿಸಲು ಹೋದ ಟಂಟಂ ಚಾಲಕ ದಿಢೀರ್ ಟರ್ನ್ ತೆಗೆದುಕೊಂಡಿದ್ದಾನೆ. ಹೀಗಾಗಿ ನಿಯಂತ್ರಣ ತಪ್ಪಿದ ಟಂಟಂ ನವನಗರದ ಸೆಕ್ಟರ್ ನಂಬರ್ 1ರ ಬೈಪಾಸ್ ರಸ್ತೆಯಲ್ಲಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಟಂಟಂ ಪಲ್ಟಿಯಾದ ಪರಿಣಾಮ ಅನ್ನಪೂರ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv