– ರಾಮನಗರ ಕ್ಷೇತ್ರದ ಜನತೆ ನನ್ನ ಪ್ರಾಣ
– ಸಂಕಷ್ಟದ ನಡುವೆ ಅಧಿಕಾರ ಮಾಡಿಕೊಂಡು ಹೋಗ್ತಿದ್ದೇನೆ
ರಾಮನಗರ: ಆಪರೇಷನ್ ಕಮಲದಿಂದ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಶಕ್ತಿ ನಮಗಿದೆ. ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನನ್ನ ಜೊತೆಗಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಸಿಎಂ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಸರ್ಕಾರ ಬೀಳಿಸಲು ಅನೇಕ ಪ್ರಯತ್ನಗಳನ್ನು ನಡೆಸಿ ವಿಫಲರಾದರು. ಅವರು ನಮ್ಮ ಶಾಸಕರಿಗೆ 30-40 ಕೋಟಿ ರೂ. ಆಮಿಷ ಒಡ್ಡಿದ್ದರು. ಅಷ್ಟೊಂದು ಹಣವನ್ನು ಯೋಗೇಶ್ವರ್ ಅವರು ಎಲ್ಲಿಂದ ಸಂಪಾದನೆ ಮಾಡಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಆರೋಪಿಸಿದರು.
ಸಂಕಷ್ಟದ ನಡುವೆ ಅಧಿಕಾರ ಮಾಡಿಕೊಂಡು ಹೋಗುತ್ತಿರುವೆ ಎಂದು ಸಿಎಂ ಕುಮಾರಸ್ವಾಮಿ ಮತ್ತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಾಗಿನಿಂದಲೂ ಬಿಜೆಪಿಯವರು ಕಿರುಕುಳ ನೀಡುತ್ತಲೇ ಇದ್ದಾರೆ. ಜೊತೆಗೆ ಮಾಧ್ಯಮಗಳಲ್ಲಿ ಇಂದು, ನಾಳೆ ಸರ್ಕಾರ ಬೀಳುತ್ತೆ ಎಂದು ಪ್ರತಿ ದಿನ ಡೆಡ್‍ಲೈನ್ ಕೊಡುತ್ತಲೆ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಹಳೇ ಮೈಸೂರು ಪ್ರಾಂತ್ಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ ಅವರು, ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ಮಾಡಲಾಗುವುದು. ಸಣ್ಣತನದ ಅಸೂಹೆ ಇರುವವರಿಗೆ ನಮ್ಮ ಯೋಜನೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆಗಸ್ಟ್ ನಂತರ ಸರ್ಕಾರ ಪತನವಾಗುತ್ತದೆ ಎಂದು ಗಡುವು ನೀಡಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಜನತೆ ನನ್ನ ಪ್ರಾಣ. ಅವರ ಋಣ ತೀರಿಸುವ ಕೆಲಸ ನನ್ನ ಮೇಲಿದೆ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ನನ್ನ ಬಳಿ ಹೇಳಿಕೊಳ್ಳಿ. ಅದನ್ನು ಈಡೇರಿಸಲು ನಾನು ಸಿದ್ಧನಿರುವೆ. ನಿಮ್ಮ ಮನೆಯ ಮಕ್ಕಳು ನಾವು. ನಾಡಿನ ಅಭಿವೃದ್ಧಿಗೆ ಕಟಿಬದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ಕ್ಷೇತ್ರದ ಜನರ ಮನವೊಲಿಸಲು ಪ್ರಯತ್ನಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv