‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ

Public TV
3 Min Read
MODI SHOBHA

ಉಡುಪಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸದ್ದು ಮಾಡುತ್ತಿದೆ. ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್ ಕೊಡಬಾರದು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೀತಾ ಇದೆ. ಬಿಜೆಪಿ ಕಾರ್ಯಕರ್ತನ ಮೇಲೆಯೇ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಿಕ್ಕಮಗಳೂರು ತರೀಕೆರೆಯಲ್ಲಿ ಸಂಸದೆ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರ ಮೊದಲಿನಿಂದಲೂ ವಲಸಿಗರ ಕ್ಷೇತ್ರ ಎಂದೇ ಪ್ರಸಿದ್ಧಿ. ಕಾಂಗ್ರೆಸ್ ಅಧಿನಾಯಕಿ ದಿವಂಗತ ಇಂದಿರಾ ಗಾಂಧಿಯಿಂದ ಈಗಿನ ಶೋಭಾ ಕರಂದ್ಲಾಜೆ ತನಕ ಇಲ್ಲಿ ಹೊರಗಿನವರೇ ಸಂಸದರಾಗಿದ್ದಾರೆ. ಪುತ್ತೂರಿನ ವಿನಯಕುಮಾರ್ ಸೊರಕೆ, ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೂ ಇದು ಮರು ಜನ್ಮನೀಡಿದ ಕ್ಷೇತ್ರ. ಇಂಥ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಮೋದಿ ಅಲೆಯಲ್ಲಿ ತೇಲಿ ಬಂದು ಗೆದ್ದವರು ದಕ್ಷಿಣ ಕನ್ನಡದ ಶೋಭಾ ಕರಂದ್ಲಾಜೆ. ಕಳೆದ ಐದು ವರ್ಷಗಳಲ್ಲಿ ರಾಜ್ಯ, ರಾಷ್ಟ್ರ ರಾಜಕಾರಣದಲ್ಲೇ ಬ್ಯುಸಿಯಿದ್ದ ಶೋಭಾ ಕರಂದ್ಲಾಜೆ ಈ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಿಲ್ಲ ಎಂಬುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಶೋಭಾ ಗೋ ಬ್ಯಾಕ್ ಅಭಿಯಾನ ಉಡುಪಿ- ಚಿಕ್ಕಮಗಳೂರಿನಲ್ಲಿ ಶುರುವಾಗಿದೆ.

SHOBHA 2

ಸಾಮಾಜಿಕ ಜಾಲತಾಣದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬರೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಯಕ್ಷಿಮಠ ಎಂಬವರ ವಿರುದ್ಧ ರಾಜ್ಯ ಬಿಜೆಪಿ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಆಪ್ತ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ದೂರು ದಾಖಲಿಸಿದ್ದಾರೆ. ಈ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ಲೋಕಸಭಾ ಚುನಾವಣೆ- ಸಂಸದ ನಳಿನ್ ಬದಲಾವಣೆಗೆ ಕೇಸರಿ ಪಡೆಯಿಂದ್ಲೇ ಒತ್ತಡ

ಸಂಸದರಾದ ಬಳಿಕ ಕ್ಷೇತ್ರವನ್ನೇ ಮರೆತಿದ್ದೀರಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತ್ಯಕ್ಷವಾಗಿದ್ದೀರಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ತರೀಕೆರೆಗೆ ರೈಲ್ವೆ ಫ್ಲಾಟ್ ಫಾರಂ ಮೇಲ್ದರ್ಜೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ, ವಕೀಲರು ಹಾಗೂ ತರೀಕೆರೆ ಸಾರ್ವಜನಿಕರು ಹೆದ್ದಾರಿ ಅಗಲೀಕರಣ ಹಾಗೂ ದುರಸ್ತಿ ಮಾಡುವಂತೆ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಗಾಂಧಿ ವೃತ್ತದಲ್ಲಿ ವಕೀಲರು ಮಾನವ ಸರಪಳಿ ನಿರ್ಮಿಸಿ ಸಂಸದರ ವಿರುದ್ಧ ಕಿಡಿಕಾರಿದ್ರು. ಒಂದು ಗಂಟೆಗೂ ಹೆಚ್ಚು ಹೊತ್ತು ರಾಷ್ಟ್ರೀಯ ಹೆದ್ದಾರಿ 206ರನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು.

SHOBHA 3

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಸ್ ಬಿಟ್ಟು ಕಾಂಗ್ರೆಸ್ ಬಂದು ಗೆದ್ದು ನಂತರ ಸೋತು ಬಿಜೆಪಿಗೆ ವಲಸೆ ಬಂದಿರುವ ಜಯಪ್ರಕಾಶ್ ಹೆಗ್ಡೆ ಎಂಪಿ ಸೀಟಿಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅದು ಬಿಟ್ಟು ಐದಾರು ಹೆಸರು ಚಾಲ್ತಿಯಲ್ಲಿದೆ. ಉಡುಪಿ-ಚಿಕ್ಕಮಗಳೂರು ಜಿಲ್ಲೆಯ 8 ಎಂಎಲ್‍ಎಗಳ ಪೈಕಿ 7 ಮಂದಿ ಬಿಜೆಪಿಯಿಂದ ಆಯ್ಕೆಯಾದವರು. ಹೀಗಾಗಿ ಅಭ್ಯರ್ಥಿಯನ್ನು ಗೆಲ್ಲಿಸುವ ಸವಾಲಿಗಿಂತ ಅಭ್ಯರ್ಥಿ ಆಯ್ಕೆಯೇ ತಲೆನೋವಾಗಿದೆ. ಕಳೆದ ಐದು ವರ್ಷಗಳಲ್ಲಿ ನಡೆದ ಸ್ಥಳೀಯ ಚುನಾವಣೆ ಸಂದರ್ಭದಲ್ಲೂ ಪ್ರಚಾರದಲ್ಲಿ ಪಾಲ್ಗೊಳ್ಳದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಶೋಭಾ ಕರಂದ್ಲಾಜೆ ಅಭ್ಯರ್ಥಿಯಾಗಿ ಪುನರಾಯ್ಕೆಯಾಗುವ ಸಂಭವವಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಸ್ಫೋಟಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಪಕ್ಷದ ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತದೆ. ಭಾರತೀಯ ಜನತಾ ಪಕ್ಷ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.

SHOBHA 1

ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿರುವ ಶೋಭಾ ಕರಂದ್ಲಾಜೆ ಸ್ವ-ಕ್ಷೇತ್ರದಲ್ಲಿ ಮುಜುಗರ ಅನುಭವಿಸುವಂತಾಗಿದೆ. ಶೋಭಾ ಕರಂದ್ಲಾಜೆ ಸಂಸದೆಯಾದ ಬಳಿಕ ಉಡುಪಿ ಜಿಲ್ಲಾ ಬಿಜೆಪಿ ಮೂರು ಬಣಗಳು ಸೃಷ್ಟಿಯಾಗಿದೆ ಎಂಬೂದು ಸುಳ್ಳಲ್ಲ. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದ್ದು, ಎರಡೂ ಜಿಲ್ಲೆಗಳ ಪರಿಚಿತ ಮತ್ತು ಸಮರ್ಥ ನಾಯಕನನ್ನು ಆಯ್ಕೆ ಮಾಡಿದ್ರೆ ಭಧ್ರಕೋಟೆಯೊಳಗೆ ಬಿಜೆಪಿಗೆ ಗೆಲುವು ಸುಲಭವಲ್ಲ ಅನ್ನೋದು ಸತ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *