ಬೆಂಗಳೂರು: ಪ್ರತೀ ಹಾಡುಗಳನ್ನೂ ಕೂಡಾ ವಿಶೇಷವಾಗಿಯೇ ಹೊರ ತರಬೇಕೆಂಬ ಇರಾದೆ ಪಡ್ಡೆಹುಲಿ ಚಿತ್ರದ ನಿರ್ದೇಶಕ ಗುರುದೇಶಪಾಂಡೆ ಅವರದ್ದು. ಇಂಥಾ ಇಂಗಿತ ಮತ್ತು ಶ್ರದ್ಧೆಯ ಕಾರಣದಿಂದಲೇ ಈವರೆಗೆ ಹೊರ ಬಂದಿರೋ ಹಾಡುಗಳೆಲ್ಲವೂ ಹೊಸಾ ಅಲೆಯೊಂದಿಗೆ ಪ್ರೇಕ್ಷಕರ ಮನಸು ತಟ್ಟಿದೆ. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಇದಂತೂ ಪಕ್ಕಾ ಡಿಫರೆಂಟಾಗಿದೆ!
ನಿರ್ದೇಶಕ ಗುರುದೇಶಪಾಂಡೆಯವರ ಕನಸಿಗೆ ಸದಾ ಸಾಥ್ ನೀಡುತ್ತಾ ಬಂದಿರುವವರು ಅಜನೀಶ್ ಲೋಕನಾಥ್. ಸಮ್ಮೋಹಕವಾದ ಹಾಡುಗಳನ್ನೇ ನೀಡುತ್ತಾ ಬಂದಿರೋ ಅಜನೀಶ್ ಇದೀಗ ಪ್ರಸಿದ್ಧ ಭಾವಗೀತೆಯೊಂದಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಬಿ.ಆರ್.ಲಕ್ಷ್ಮಣರಾಯರು ಬರೆದಿರುವ ಹೇಳಿ ಹೋಗು ಕಾರಣ ಎಂಬ ಭಾವ ಗೀತೆಗೆ ಬೆರಗಾಗಿಸುವಂಥಾ ಸಂಗೀತ ನೀಡಿದ್ದಾರೆ.
ಸಿದ್ಧಾರ್ಥ್ ಮಹಾದೇವನ್ ಮತ್ತು ಗುಬ್ಬಿ ಹಾಡಿರುವ ಈ ಹಾಡೀಗ ಅನಾವರಣಗೊಂಡಿದೆ. ಒಂದು ಕಾಲದಲ್ಲಿ ಹೇಳಿ ಹೋಗು ಕಾರಣ ಎಂಬ ಈ ಹಾಡು ಸಿ.ಅಶ್ವತ್ಥ್ ಅವರ ಕಂಠದಲ್ಲಿ ಮಾಡಿದ್ದ ಮೋಡಿ ಸಣ್ಣದೇನಲ್ಲ. ಅದು ಸಾರ್ವಕಾಲಿಕ. ಇದೀಗ ಅಜನೀಶ್ ಅದೇ ಹಾಡನ್ನು ಈ ತಲೆಮಾರಿನ ಮನಸ್ಥಿತಿಗೆ ಒಪ್ಪುವಂಥಾ ಸಂಗೀತದೊಂದಿಗೆ ಸಿದ್ಧಗೊಳಿಸಿದ್ದಾರೆ. ಈ ಹಾಡೀಗ ಈ ಹಿಂದೆ ಬಿಡುಗಡೆಯಾಗಿದ್ದ ಪಡ್ಡೆ ಹುಲಿ ಹಾಡುಗಳನ್ನೇ ಮೀರಿಸುವಂತೆ ಎಲ್ಲೆಡೆ ಹರಿದಾಡುತ್ತಿದೆ.
ಈ ಮೂಲಕವೇ ಶ್ರೇಯಸ್ ಅಭಿನಯದ ಪಡ್ಡೆಹುಲಿ ಮತ್ತೊಂದು ಥರದಲ್ಲಿ ಅಬ್ಬರಿಸುತ್ತಿದೆ. ಬಿಡುಗಡೆಯ ಹಾದಿಯಲ್ಲಿರೋ ಈ ಸಿನಿಮಾದ ಬಗೆಗಿರುವ ಕ್ರೇಜ್ ಈಗ ಹಾಡುಗಳ ಮೂಲಕವೇ ಮತ್ತಷ್ಟು ಲಕಲಕಿಸಲಾರಂಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv