– ಮೂಲ ಉದ್ದೇಶವನ್ನೇ ಮರೆತ ಶಾಸಕರು
– ಬಿಜೆಪಿಯವರಿಗೆ ಸ್ವಹಿತ ಮುಖ್ಯವಾಗಿದೆ
ಬೆಂಗಳೂರು: ಅವರ ಮುಖ ನೋಡಬೇಕು ಇಂಗು ತಿಂದ ಮಂಗನಂತಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ಶಾಸಕರ ಕುರಿತು ವ್ಯಂಗ್ಯವಾಡಿದ್ದಾರೆ.
ಕಲಾಪದ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ಸದನದಲ್ಲಿ ಜನರ ಜ್ವಲಂತ ಸಮಸ್ಯೆ ಚರ್ಚೆ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುವುದಕ್ಕೆ ಇಲ್ಲಿಗೆ ಬರಬೇಕೇ? ಅವರಿಗೆ ಸ್ವಹಿತ ಮುಖ್ಯವೇ ಹೊರತು ಜನರ ಹಿತ ಮುಖ್ಯವಲ್ಲ. ಅವರು ಮೂಲ ಉದ್ದೇಶವನ್ನೇ ಮರೆತುಬಿಟ್ಟಿದ್ದಾರೆ. ಇದನ್ನು ರಾಜ್ಯದ ಜನ ಕ್ಷಮಿಸುವುದದಿಲ್ಲ ಎಂದು ಹೇಳಿ ಬಿಜೆಪಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲ ವಜುಬಾಯ್ ವಾಲಾ ಅವರನ್ನು ಭೇಟಿಯಾಗಿದ್ದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟದ ದೂರು ನೀಡಲು ಹೋಗಿದ್ದು ಸರಿಯಲ್ಲ. ಎಲ್ಲ ರೀತಿಯ ವಿಚಾರ ಕಾನೂನು, ಸುವ್ಯವಸ್ಥೆ ವಿಚಾರ ಅಸೆಂಬ್ಲಿಯಲ್ಲಿ ಚರ್ಚೆ ಮಾಡಬೇಕಲ್ಲವೇ? ರಾಜಭವನ ಇಂತಹ ಆರೋಪಗಳನ್ನು ಚರ್ಚೆ ಮಾಡುವ ಜಾಗವೇ? ಬಿಜೆಪಿಯವರು ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ವಿರೋಧ ಪಕ್ಷದವರಿಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಆಸಕ್ತಿಯಿಲ್ಲ. ಈ ಬಾರಿ ಸದನ ನಡೆಸಬಾರದೆಂದು ಬಿಜೆಪಿಯವರು ತೀರ್ಮಾನ ಮಾಡಿಕೊಂಡು ಬಂದಿದ್ದರು. ಹೀಗಾಗಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಉಂಟು ಮಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಾದರೆ ಸದನದಲ್ಲಿ ಕೇಳಬೇಕಿತ್ತು. ಅದನ್ನು ಬಿಟ್ಟು ಗಲಾಟೆ ಮಾಡಿದ ಎಂದು ಅವರು, ಅಸೆಂಬ್ಲಿ ಹೇಗೆ ನಡೆಯಬೇಕೆಂದು ಬ್ಯುಸಿನೆಸ್ ಅಡ್ವೈಸರಿ ಕಮಿಟಿಯಲ್ಲಿ ಚರ್ಚೆ ಮಾಡಬೇಕು ಎಂದು ತಿಳಿಸಿದರು.
ಅತೃಪ್ತರ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಈ ಹಿಂದೆ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಗೆ ಹಾಗೂ ಕಲಾಪಕ್ಕೆ ಶಾಸಕರು ಬಂದಿರಲಿಲ್ಲ. ಹೀಗಾಗಿ ವಿಪ್ ಹಾಗೂ ನೋಟಿಸ್ ಜಾರಿ ಮಾಡಿದ್ದೇವು. ಬಳಿಕ ಸ್ಪೀಕರ್ ಅವರಿಗೆ ದೂರು ನೀಡಿದ್ದೇವು ಅಷ್ಟೇ ಎಂದು ಹೇಳಿ ಜಾರಿಕೊಂಡರು.
ಎಸ್‍ಐಟಿ ತನಿಖೆಗೆ ಸಿಎಂ ಕುಮಾರಸ್ವಾಮಿ ಅವರೇ ಘೋಷಣೆ ಮಾಡಿದ್ದಾರೆ ಹೊರತು ನಾನಲ್ಲ. ಇಂತಹ ವಿಚಾರಗಳನ್ನು ನಾನು ಘೋಷಣೆ ಮಾಡುವುದಕ್ಕೆ ಆಗುತ್ತಾ? ನಾನೊಬ್ಬ ಸದಸ್ಯನಾಗಿ ಸಲಹೆಯನ್ನು ಹೇಳಿದ್ದೇನೆ ಅಷ್ಟೇ. ಎಸ್‍ಐಟಿ ತನಿಖೆಗೆ ಆದೇಶವಾಗಿದ್ದು, ಆದಷ್ಟು ಬೇಗ ತನಿಖಾ ತಂಡವನ್ನು ಸಿಎಂ ಕುಮಾರಸ್ವಾಮಿ ಅವರು ರಚನೆ ಮಾಡುತ್ತಾರೆ ಎದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv