ಪಕ್ಷ ಇಲ್ಲವೇ ರಾಜೀನಾಮೆ ಎರಡೇ ಆಯ್ಕೆ: ಉಮೇಶ್ ಜಾಧವ್

Public TV
2 Min Read
UMESH JADHAV Congress

– ಸಚಿವ ಸ್ಥಾನಕ್ಕೆ ಕ್ಷೇತ್ರದ ಜನರಿಂದ ಒತ್ತಾಯ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿರಬೇಕು. ಇಲ್ಲವೇ ರಾಜೀನಾಮೆ ನೀಡಬೇಕು. ಈ ಎರಡರಲ್ಲಿ ಒಂದು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ವಿಧಾನಸಭೆ ಕಲಾಪಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ರಾಜೀನಾಮೆ ನೀಡುವ ವಿಚಾರದಲ್ಲಿ ಗೊಂದಲವಿದ್ದು, ಕ್ಷೇತ್ರದ ಮತದಾರರ ಸಲಹೆ ಪಡೆದು ಮುಂದುವರಿಯುತ್ತೇನೆ. ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ ನೋಟಿಸ್ ತಲುಪಿದ ಮೇಲೆ ಉತ್ತರ ಕೊಡುತ್ತೇನೆ. ಸ್ಥಳೀಯವಾಗಿ ಕ್ಷೇತ್ರದಲ್ಲಿ ಸಮಸ್ಯೆಯಿಂದ ಅಸಮಾಧಾನವಿದೆ ಎಂದು ಹೇಳಿದರು.

ಬಿಜೆಪಿಯವರ ಆಪರೇಷನ್ ಕಮಲಕ್ಕೆ ನಾನು ಒಳಗಾಗಿಲ್ಲ. ಅಲ್ಲಿ ನನ್ನ ಸ್ನೇಹಿತರಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ಮುಂಬೈ ಹೋಟೆಲ್‍ನಲ್ಲಿ ಇರಲಿಲ್ಲ. ನಾನು ಬೆಂಗಳೂರಿನಲ್ಲೇ ಇದ್ದೆ ಎಂದ ಶಾಸಕರು, ನಾನು ಪಕ್ಷದಲ್ಲೇ ಇರುತ್ತೇನೆ. ಪಕ್ಷ ಬಿಟ್ಟು ಹೋಗಲ್ಲ. ಕಲಾಪದಲ್ಲಿ ಇಂದು ಬಜೆಟ್ ವಿಧೇಯಕ ಮತದಾನ ಹೀಗಾಗಿ ಬಂದಿದ್ದೇನೆ ಎಂದರು.

UMESH JADHAV 1

ಸಿಎಲ್‍ಪಿ ಸಭೆಗೆ ಗೈರು ಆಗಿದ್ದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ವೈಯಕ್ತಿಕ ಕಾರಣದಿಂದಾಗಿ ಹಾಜರಾಗಿಲ್ಲ. ಈ ಸಂಬಂಧ ಪಕ್ಷದ ನಾಯಕರಿಗೆ ಕಾರಣ ಕೊಟ್ಟಿದ್ದೇನೆ. ನನ್ನ ಸ್ಪಷ್ಟನೆಯಲ್ಲಿ ತಪ್ಪು ಇದ್ದರೆ ಕ್ರಮ ಕೈಗೊಳ್ಳಲಿ ಎಂದ ಅವರು, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೊಡ್ಡವರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ ಎಂದು ಹೇಳಿ ಟಾಂಗ್ ಕೊಟ್ಟರು.

ನಾನು ತಪ್ಪು ಮಾಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ನಾಯಕ. ಬಿಜೆಪಿಯಲ್ಲಿ ನನ್ನ ಗೆಳೆಯರಿದ್ದಾರೆ. ಅವರ ಜೊತೆಗೆ ಸಂಪರ್ಕದಲ್ಲಿ ಇಲ್ಲದೆ ಇರುವುದಕ್ಕೆ ಆಗುತ್ತದೆಯೇ? ಸರ್ಕಾರ ಬೀಳಿಸುವ ವಿಚಾರವನ್ನ ಮಾಡಿಲ್ಲ. ಅಷ್ಟೇ ಅಲ್ಲದೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ಕ್ಷೇತ್ರದ ಮತದಾರರಿಗೆ ನಾನು ಸಚಿವನಾಗಬೇಕು ಎನ್ನುವ ಆಶಯ ಎಂದು ಸಚಿವ ಸ್ಥಾನದ ಬೇಡಿಕೆಯನ್ನು ಸಮರ್ಥಿಸಿಕೊಂಡರು.

ಕಲಾಪದಲ್ಲಿ ಕ್ಷೇತ್ರದ ಸಮಸ್ಯೆ ಕುರಿತು ಮತದಾನ ಮಾಡಬೇಕು. ಇವತ್ತೂ ಕೂಡ ಬಂದಿಲ್ಲ ಎನ್ನುವ ಕಳಂಕ ಹೊತ್ತುಕೊಳ್ಳಲು ನಾನು ಸಿದ್ಧನಿಲ್ಲ ಎಂದ ಅವರು, ನಾನು ಗೊಂದಲದಲ್ಲಿದ್ದೇನೆ. ರಾಜೀನಾಮೆ ಕುರಿತು ನಿರ್ಣಯವಾಗಿಲ್ಲ ಎಂದರು.

ಬಿಜೆಪಿಯಿಂದ ಲೋಕಸಭೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ಈ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಹೀಗೆ ಸುದ್ದಿ ಬರುತ್ತಿರುವುದನ್ನು ನೋಡಿದ್ದೇನೆ ಅಷ್ಟೇ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *