ಬೆಂಗಳೂರು: ಹಣದಾಸೆಗಾಗಿ ನೀಚ ತಾಯಿಯೊಬ್ಬಳು ತನ್ನ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗಳ ಮದುವೆಗೆ ಮುಂದಾಗಿದ್ದ ಘಟನೆ ನಗರದ ನ್ಯೂ ಬಾಗಲೂರು ಲೇಔಟ್‍ನಲ್ಲಿರುವ ದುರ್ಗದೇವಿ ದೇವಸ್ಥಾನ ಮುಂದೆ ನಡೆದಿದೆ.
ತಾಯಿ ನಾಗಲಕ್ಷ್ಮಿ ತನ್ನ ಅಪ್ರಾಪ್ತ ಮಗಳಿಗೆ ಎರಡನೇ ಸಂಬಂಧದ ಮದುವೆ ಮಾಡಲು ಹೊರಟ್ಟಿದ್ದಳು. ಭಾನುವಾರ ತಾಯಿ ನಾಗಲಕ್ಷ್ಮಿ ಈಗಾಗಲೇ ಮದುವೆ ಆಗಿದ್ದವನ ಜೊತೆ ತನ್ನ ಮಗಳ ಮದುವೆ ಮಾಡಲು ಮುಂದಾಗಿದ್ದಳು. ಮಗಳು ಒಂಬತ್ತನೇ ತರಗತಿ ಓದುತ್ತಿದ್ದು, ಇದಕ್ಕೆ ನಾವು, ಬಾಲಕಿಯ ಅಣ್ಣ ಮತ್ತು ಸಂಬಂಧಿಕರು ಸೇರಿ ವಿರೋಧ ವ್ಯಕ್ತಪಡಿಸಿದ್ದೇವೆ. ಕೊನೆಗೆ ನಾವು ಕೆಲ ಮಹಿಳಾ ಸಂಘಟನೆಯ ಸಹಾಯದಿಂದ ಮದುವೆ ನಿಲ್ಲಿಸಿದ್ದೇವೆ ಎಂದು ಬಾಲಕಿಯ ಅತ್ತೆ ಹೇಳಿದ್ದಾರೆ.

ಮದುವೆ ಗಂಡಿನ ಬಳಿ ಹಣ ಪಡೆದುಕೊಂಡು ಅಪ್ರಾಪ್ತಳಿಗೆ ತಾಯಿ ನಾಗಲಕ್ಷ್ಮಿ ಮದುವೆ ಮಾಡಲು ಹೊರಟಿದ್ದಳೆಂದು ಆರೋಪಿಸಲಾಗಿದೆ. ಮದುವೆಗೆ ವಿರೋಧವಾಗುತ್ತಿದ್ದಂತೆ ತಾಯಿ ತನ್ನ ಮಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ಮಹಿಳಾ ಸಂಘಟನೆಯ ಸದಸ್ಯೆ ಜಯಮ್ಮ ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಬಾಣಸವಾಡಿಯಲ್ಲಿ ಸಂಬಂಧಿಕರು ಕೇಸ್ ದಾಖಲಿಸಲು ಮುಂದಾಗಿದ್ದು, ಹಣದಾಸೆಗೆ ಮಗಳ ಬಾಳನ್ನು ಬಲಿ ಕೊಡಲು ಹೊರಟ ತಾಯಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
