ವೆಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮಹಿಳಾ ಟಿ20ಯ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಾನ ಕೇವಲ 24 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಟೀಂ ಇಂಡಿಯಾ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ದಾಖಲಾದ ವೇಗದ ಅರ್ಧ ಶತಕ ಇದಾಗಿದ್ದು, ಈ ಮೂಲಕ ಮಂದಾನ ದಾಖಲೆ ಬರೆದಿದ್ದಾರೆ. ಆದರೆ ಮಂದಾನರ ಬಿರುಸಿನ ಆಟದ ಬಳಿವೂ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಪಂದ್ಯದಲ್ಲಿ 34 ಎಸೆತಗಳನ್ನ ಎದುರಿಸಿದ ಮಂದಾನ 3 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ತಂಡದ ಗೆಲುವಿಗೆ 58 ರನ್ ಗಳ ಅಗತ್ಯವಿತ್ತು. 102 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 34 ರನ್ ಕಲೆ ಹಾಕಲು ಮಾತ್ರ ಶಕ್ತವಾಯಿತು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್ ಸಿಡಿಸಿತ್ತು. ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ತಂಡ 19.1 ಓವರ್ ಗಳಲ್ಲಿ 136 ರನ್ ಗಳಿಗೆ ಅಲೌಟ್ ಆಗುವ ಮೂಲಕ 23 ರನ್ ಗಳ ಸೋಲುಂಡಿತು. ಇದರೊಂದಿಗೆ ಏಕದಿನ ಕ್ರಿಕೆಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಸಂಭ್ರಮಿಸಿದ್ದ ಟೀಂ ಇಂಡಿಯಾ ಮಹಿಳಾ ತಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೋಲಿನ ಆರಂಭ ಮಾಡಿದೆ.
ಉಳಿದಂತೆ ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಮಂದಾನ ನಂ.1 ಸ್ಥಾನ ಪಡೆದಿದ್ದರು. 2018 ಬಳಿಕ 15 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಮಂದಾನ 2 ಶತಕ ಹಾಗೂ 8 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಐಸಿಸಿ ಘೋಷಣೆ ಮಾಡಿದ್ದ 2018ರ ರ ವಾರ್ಷಿಕ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದರು. 22 ವರ್ಷದ ಮಂದಾನ 47 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 1,798 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 14 ಅರ್ಧ ಶತಕಗಳು ಸೇರಿದೆ. ಉಳಿದಂತೆ 52 ಟಿ20 ಪಂದ್ಯಗಳನ್ನು ಆಡಿದ್ದು, 6 ಅರ್ಧ ಶತಕಗಳೊಂದಿಗೆ 1,046 ರನ್ ಸಿಡಿಸಿದ್ದಾರೆ. 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv