– ಸಿಎಂ ಎಚ್‍ಡಿಕೆ ರಾಜೀನಾಮೆ ಕೊಟ್ಟರೆ ಕೊಡ್ಲಿ, ಯಾರಿಗೇನಂತೆ!
ತುಮಕೂರು: ಕುಮಾರಸ್ವಾಮಿ ರಾಜೀನಾಮೆ ಕೊಟ್ಟರೆ ಕೊಡಲಿ ಯಾರಿಗೆ ಏನು ಆಗುತ್ತೆ. ಆದರೆ ಸಿದ್ದರಾಮಯ್ಯ ಅವರು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷವೇ ಇಲ್ಲ ಎಂದು ಮಾಜಿ ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬುಡೇನ್ ಸಾಬ್ರಿಗೂ ಹೆಂಡ್ತಿ ಇಲ್ಲ, ಬೂವಮ್ಮನಿಗೂ ಗಂಡನಿಲ್ಲ ಎನ್ನುವಂತೆ ಜೆಡಿಎಸ್-ಕಾಂಗ್ರೆಸ್ ಸಹವಾಸ ಆಗಿದ್ದು, ಸಿದ್ದರಾಮಯ್ಯ ಅವರು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷವೇ ಇಲ್ಲ. ಸಿಎಂ ಎಚ್‍ಡಿಕೆ ಅವರು ಬೇಕಾದರೆ ರಾಜೀನಾಮೆ ಕೊಡಲಿ, ಯಾರಿಗೆ ಏನು ಆಗುತ್ತೆ. ಶಾಸಕರನ್ನು ನಿಯಂತ್ರಣ ಮಾಡಲು ಅವರು ಏನು ಚಿಕ್ಕ ಮಕ್ಕಳಲ್ಲ. ಬಿಜೆಪಿಯನ್ನು ದೂರವಿಡಬೇಕು ಎಂಬ ಒಂದೇ ಉದ್ದೇಶದಿಂದ ನಾವೆಲ್ಲಾ ತ್ಯಾಗ ಮಾಡಿ ಸಿಎಂ ಕುರ್ಚಿಯನ್ನು ಕುಮಾರಸ್ವಾಮಿ ಅವರಿಗೆ ನೀಡಿದ್ದೇವೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವಿಧ ಅಭಿಪ್ರಾಯಗಳು ಇದ್ದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ. ಹೀಗಾಗಿ ಸಿಎಂ ಆದವರು ಜವಾಬ್ದಾರಿಯಿಂದ ಸರ್ಕಾರವನ್ನು ಮುನ್ನಡೆಸಬೇಕು ಎಂದು ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. ಬಂಡಾಯ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಕುರಿತು ಪ್ರಶ್ನೆಗೆ ಉತ್ತರಿಸಿ, ಅವರು ಈಗಾಗಲೇ ಪಕ್ಷ ಬಿಟ್ಟಿದ್ದಾರೆ. ಅವರು ಪಕ್ಷದಿಂದಲೇ ದೂರ ಉಳಿದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ತುಮಕೂರು ಲೋಕಸಭಾ ಕ್ಷೇತ್ರವನ್ನ ಜೆಡಿಎಸ್‍ಗೆ ಬಿಟ್ಟುಕೊಡಲು ಕೇತ್ರದಲ್ಲಿ ಹಾಲಿ ಸಂಸದರು ಇರುವಾಗ ಈ ರೀತಿ ಕೇಳಲು ಜೆಡಿಎಸ್ ಪಕ್ಷದವರಿಗೆ ಮಾನ ಮರ್ಯಾದೆ ಬೇಡ್ವ? 8 ಕ್ಷೇತ್ರದಲ್ಲಿ ನಾವೇ ಮುಂದಿದ್ದೇವೆ ಎನ್ನುವುದಾದರೆ ಹಿಂದೆ 4 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದನ್ನ ಮರೆತು ಬಿಟ್ಟಿದ್ದಾರೆಯೇ ಎಂದು ಟೀಕೆ ಮಾಡಿದರು. ಅಲ್ಲದೇ ಇದೇ ವೇಳೆ ಪರೋಕ್ಷವಾಗಿ ಬಂಡಾಯ ಸ್ಪರ್ಧೆ ಬಗ್ಗೆ ಎಚ್ಚರಿಕೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv