ಅನುಮಾನಸ್ಪದವಾಗಿ ಮಗಳು ಸಾವು- 1 ಲಕ್ಷ ಪಡೆದು ಮರಣೋತ್ತರ ವರದಿ ಕೊಟ್ಟ ಪೊಲೀಸ್

Public TV
2 Min Read
CKB STUDENT

– ಎಫ್‍ಎಸ್‍ಎಲ್ ವರದಿಗಾಗಿ 1 ವರ್ಷದಿಂದ ಪೋಷಕರು ಅಲೆದಾಟ

ಚಿಕ್ಕಬಳ್ಳಾಪುರ: ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಮಗಳ ಸಾವಿನ ಸತ್ಯ ತಿಳಿಸಿ, ಮಗಳ ಸಾವಿನ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್) ವರದಿಯಾದರೂ ಕೊಡಿ ಅಂತ ಪ್ರತಿದಿನ ತಾಯಿ ಪೊಲೀಸ್ ಠಾಣೆಗೆ ಬಂದು ಅಂಗಲಾಚಿದರೂ ಪೊಲೀಸರು ಸ್ಪಂದಿಸಿಲ್ಲವಂತೆ. ಎಫ್‍ಎಸ್‍ಎಲ್ ವರದಿ ಕೊಡುತ್ತೀನಿ ಎಂದ ಪೊಲೀಸಪ್ಪ ಒಂದು ಲಕ್ಷ ರೂಪಾಯಿ ಪಡೆದು ಮರಣೋತ್ತರ ಪರೀಕ್ಷೆ ವರದಿ ಕೊಟ್ಟಿದ್ದಾನೆ ಅಂತ ತಾಯಿಯೊಬ್ಬರು ಪೊಲೀಸ್ ಠಾಣೆಯೊಳಗೆ ರಂಪಾಟ ಮಾಡಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ckb

ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬೆಸಲಪಲ್ಲಿ ಗ್ರಾಮದ ನಿವಾಸಿ ರಾಧಾ ಪೊಲೀಸ್ ಠಾಣೆಯೊಳಗೆ ರಂಪಾಟ ಮಾಡಿದ ಮಹಿಳೆ. ಇವರ ಮಗಳು ಸರಿತಾ ಚಿಕ್ಕಬಳ್ಳಾಪುರ ನಗರ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ಬಿಜಿಎಸ್ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, ಬಿಜಿಎಸ್ ವಸತಿ ನಿಲಯದಲ್ಲೇ 2017 ರ ಸೆಪ್ಟೆಂಬರ್ 9 ರಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು. ಹೀಗಾಗಿ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಸ್ವಾಮಿ ಅಂತ ಸರಿತಾ ತಂದೆ ಶ್ರೀನಿವಾಸ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ 2018ರ ಏಪ್ರಿಲ್ ನಲ್ಲೇ ಎಫ್‍ಎಸ್‍ಎಲ್ ರಿಪೋರ್ಟ್ ಲಭಿಸಿದ್ದು, ಎಫ್‍ಎಸ್‍ಎಲ್ ವರದಿ ಪ್ರಕಾರ ಸರಿತಾ ಆರ್ಗಾನ್ ಫಾಸ್ಪರಸ್ ಕ್ರೀಮಿನಾಶಕ ಸೇವಿಸಿ ಸಾವನ್ನಪ್ಪಿರುವುದು ಧೃಡವಾಗಿದೆ.

vlcsnap 2019 02 02 09h31m52s908

ಮಗಳ ಸಾವಿನ ಸತ್ಯ ತಿಳಿಸಿ ಅಂತ ಅಂದಿನಿಂದ ಇಂದಿನವರೆಗೂ ಅಲೆದರೂ ಪೊಲೀಸರು ಸತ್ಯ ಮಾತ್ರ ತಿಳಿಸುತ್ತಿಲ್ಲ. ಆದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೇದೆ ರಂಗನಾಥ್ ಹಾಗೂ ಪಿಎಸ್‍ಐ ವೆಂಕಟೇಶ್ ಎಫ್‍ಎಸ್‍ಎಲ್ ವರದಿ ಕೊಡುತ್ತೀವಿ ಅಂತ ಒಂದು ಲಕ್ಷ ರೂಪಾಯಿ ಲಂಚ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷಾ ವರದಿ ಕೊಟ್ಟಿದ್ದಾರೆ ಅಂತ ಮೃತ ಸರಿತಾ ತಾಯಿ ರಾಧಾ ಗಂಭೀರ ಆರೋಪ ಮಾಡಿದ್ದಾರೆ.

ಎಫ್‍ಎಸ್‍ಎಲ್ ವರದಿ ಸಿಗುತ್ತೆ ಅಂತ ಪೊಲೀಸರಿಗೆ ಒಂದು ಲಕ್ಷ ಕೊಟ್ಟು ಸರಿತಾ ತಂದೆ ತಾಯಿಗೆ ಪೊಲೀಸರು ಕೊಟ್ಟ ವರದಿ ಎಫ್‍ಎಸ್‍ಎಲ್ ಅಲ್ಲ ಅದು ಮರಣೋತ್ತರ ಪರೀಕ್ಷೆ ಮಾತ್ರ ಅಂತ ಗೊತ್ತಾದ ಕೂಡಲೇ ಪೋಷಕರು ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಕರ್ತವ್ಯನಿರತನಾಗಿದ್ದ ಪಿಎಸ್‍ಐ ವೆಂಕಟೇಶ್ ವಿರುದ್ಧ ಮುಗಿಬಿದ್ದು ನಡುರಸ್ತೆಯ್ಲಲೇ ಹಾದಿ ಬೀದಿ ರಂಪಾಟ ಮಾಡಿದ್ದಾರೆ. ಇದಲ್ಲದೇ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯೊಳಗೆ ನುಗ್ಗಿ ಪಿಎಸ್‍ಐ ವೆಂಕಟೇಶ್ ಹಾಗೂ ಪೇದೆ ರಂಗನಾಥ್ ವಿರುದ್ಧ ಕೆಂಡಕಾರಿದ್ದಾರೆ.

cbk

ಪೋಷಕರ ಆರೋಪ:
ಆದಿಚುಂಚನಗಿರಿ ಶಾಖಾಮಠದ ಬಿಜಿಎಸ್ ವಸತಿ ನಿಲಯದಲ್ಲೇ ವಿದ್ಯಾರ್ಥಿ ಸರಿತಾ ಸಾವನ್ನಪ್ಪಿರುವುದರಿಂದ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತೆ ಅನ್ನೋ ಉದ್ದೇಶದಿಂದ ಸಂಸ್ಥೆಯವರು ಪ್ರಕರಣದ ಮಾಹಿತಿಯನ್ನ ಬಹಿರಂಗಪಡಿದಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ನಮಗೆ ಕದ್ದು ಮುಚ್ಚಿ ಎಫ್‍ಎಸ್‍ಎಲ್ ವರದಿ ಕೊಡುತ್ತೀನಿ ಅಂತ ಅಪೂರ್ಣವಾದ ಮರಣೋತ್ತರ ವರದಿ ಕೊಟ್ಟು ಲಕ್ಷ ಕೊಳ್ಳೆ ಹೊಡೆದಿದ್ದಾರೆ ಅನ್ನೋದು ಪೋಷಕರ ಗಂಭೀರ ಆರೋಪವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಮಹಿಳೆ ಮಾಡಿದ ಆರೋಪ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *