-ಇಲ್ಲಿಯ ಗಿಡಗಳ ಪರಿಮಳದಿಂದ ಚರ್ಮವ್ಯಾಧಿ, ಅಸ್ತಮಾ ನಿವಾರಣೆಯಂತೆ!
ಬೆಂಗಳೂರು: ನಗರದಲ್ಲಿ ವಾಕಿಂಗ್, ಜಾಗಿಂಗ್ ಅಂದರೆ ನೆನಪಾಗೋದು ಪಾರ್ಕ್ ಗಳು. ನಗರದಲ್ಲಿ ಸಿಕ್ಕಾಪಟ್ಟೆ ಪಾರ್ಕ್ ಗಳಿವೆ. ಆದರೆ ಜಯನಗರದಲ್ಲಿರುವ ಪಾರ್ಕ್‌ಗೆ ಕಾಲಿಟ್ಟರೇ ಸಾಕು ನಿಮಗೆ ಅಂಟಿದ ರೋಗಗಳೆಲ್ಲ ಮಾಯವಾಗತ್ತವೆ.
ಹೌದು..ಜಯನಗರದ ಯಡಿಯೂರು ವಾರ್ಡ್ ನ ಲಕ್ಷಣರಾವ್ ಉದ್ಯಾನವನದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಚ್ಚ ಹಸಿರು, ಕಾಲಿಡುತ್ತಿದ್ದಂತೆ ಮನ ತಣಿಸುವ ಆಹ್ಲಾದಕರ ವಾತಾವರಣ, ಹಸಿರ ಹುಲ್ಲಿಗೂ ಹೊಸ ಹುರುಪು, ಈಗ ತಾನೇ ಕಣ್ ಬಿಟ್ಟು ಚಿಗುರಿಗೂ ಚೇತನ. ಒಟ್ಟಿನಲ್ಲಿ ಕಾಂಕ್ರೀಟ್ ಕಾಡಿನಲ್ಲಿ ಅರಳಿನಿಂತಿರುವ ಪ್ರಕೃತಿ ವನಗಳು ಎಂಬಂತೆ ಭಾಸವಾಗುತ್ತದೆ.
ಈ ಜೋಡಿ ಪಾರ್ಕ್ ಗಳ ಹೆಸರು ಧನ್ವಂತರಿ ಹಾಗೂ ಸಂಜೀವಿನಿ. ಸಿಲಿಕಾನ್ ಸಿಟಿ ಜನ ಒತ್ತಡದ ಬದುಕು ಹಾಗೂ ಮಾಲಿನ್ಯದಿಂದಾಗಿ ಅನೇಕ ರೋಗಗಳಿಗೆ ಒಳಗಾಗುತ್ತಿದ್ದಾರೆ. ಇದೆಲ್ಲದಕ್ಕೆ ಸಲ್ಯೂಶನ್ ಎಂಬಂತೆ ತಲೆಯೆತ್ತಿದೆ ಈ ಉದ್ಯಾನವನ. ಇದು ಸಾಮಾನ್ಯವಾದ ಪಾರ್ಕ್ ಅಲ್ಲ, ಬದಲಾಗಿ ವಿಶೇಷ ಔಷಧಿಯುಕ್ತ ಸಸ್ಯರಾಶಿಗಳ ವನ. ಈ ಪ್ರಕೃತಿ ವನಗಳು, ಡಿಸೆಂಬರ್ ನಲ್ಲಿ ಉದ್ಘಾಟನೆಗೊಂಡಿದ್ದು, 75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ವಿದ್ಯಾರ್ಥಿನಿ ನಿಸರ್ಗ ಹೇಳಿದ್ದಾರೆ.
300ಕ್ಕೂ ಹೆಚ್ಚು ಆರ್ಯುವೇದದ ಔಷಧಿ ಗಿಡಗಳನ್ನು ಇಲ್ಲಿ ನೆಡಲಾಗಿದೆ. ಇದರ ಮತ್ತೊಂದು ವಿಶೇಷ ವೆಂದರೆ ಈ ಗಿಡಗಳ ಪರಿಮಳದಿಂದಲೇ ಚರ್ಮವ್ಯಾಧಿ, ಅಸ್ತಮಾದಂತಹ ಅದೆಷ್ಟೋ ಕಾಯಿಲೆಗಳು ವಾಸಿಯಾಗುತ್ತವೆಯಂತೆ. ಹೀಗಾಗಿ ಪ್ರತಿನಿತ್ಯ ಬೆಳ್ಳಿಗ್ಗೆ ಹಾಗೂ ಸಂಜೆ ನೂರಾರು ವಾಯು ವಿಹಾರಿಗಳು ಇಲ್ಲಿಗೆ ಬಂದು 1.5 ಕಿ.ಮೀ ನಡೆದು ಸ್ವಚ್ಛ ಆರೋಗ್ಯಕರ ಗಾಳಿ ಸೇವಿಸುತ್ತಾರೆ ಎಂದು ಸ್ಥಳೀಯ ಸುಧಾಕರ್ ಪೈ ತಿಳಿಸಿದ್ದಾರೆ.
ಆರ್ಯುವೇದದಿಂದಲೇ ಆರೋಗ್ಯವೆಂದು ಜನರು ಮತ್ತೆ ಪ್ರಕೃತಿ ಚಿಕಿತ್ಸೆಯತ್ತಾ ಹೊರಳುತ್ತಿದ್ದಾರೆ. ಶುದ್ಧ ಗಾಳಿ ನೀಡುತ್ತಿರುವ ಇಂತಹ ಸಸ್ಯರಾಶಿಯನ್ನು ಉಳಿಸಿ-ಬೆಳೆಸಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv