ಬ್ರಿಟನ್‍ನಿಂದ ಮಂಗ್ಳೂರಿಗೆ ಬಂತು ಖಾಸಗಿ ಏರ್ ಅಂಬುಲೆನ್ಸ್

Public TV
2 Min Read
air amb

ಮಂಗಳೂರು: ರೋಗಿಯನ್ನು ಕರೆದುಕೊಂಡು ಹೋಗಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರಿಟನ್‍ನಿಂದ ಖಾಸಗಿ ಏರ್ ಅಂಬುಲೆನ್ಸ್ ಬಂದಿಳಿದಿದೆ.

ಭಾನುವಾರ ಮಧ್ಯರಾತ್ರಿ ಬ್ರಿಟನ್‍ನಿಂದ ಏರ್ ಅಂಬುಲೆನ್ಸ್ ಮಂಗಳೂರಿಗೆ ಆಗಮಿಸಿದ್ದು, ಈ ಬಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್ ಸ್ಪಷ್ಟಪಡಿಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿದೇಶಿ ಮಹಿಳೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಸ್ವದೇಶಕ್ಕೆ ಹಿಂದಿರುಗಿಸಲು ಎರಡು ದಿನ ಹಿಂದೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬ್ರಿಟನ್‍ನಿಂದ ಖಾಸಗಿ ಏರ್ ಅಂಬುಲೆನ್ಸ್ ಬಂದಿಳಿದಿತ್ತು. ಅದರಲ್ಲಿ ವಿದೇಶಿ ಮಹಿಳೆಯನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಏರ್ ಅಂಬುಲೆನ್ಸ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತಕ್ಷಣ ರೋಗಿಗೆ ತೊಂದರೆಯಾಗಬಾರದೆಂದು ಬ್ರಿಟನ್ ನಿಂದ ಮತ್ತೊಂದು ಏರ್ ಅಂಬುಲೆನ್ಸ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

mangalore

ನಿರ್ದೇಶಕ ವಿ.ವಿ.ರಾವ್ ಸ್ಪಷ್ಟನೆ:
ನಗರದ ಎ.ಜೆ ಆಸ್ಪತ್ರೆಯಲ್ಲಿ ಬ್ರಿಟನ್ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಒಂದು ವೇಳೆ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ ಎಂದರೆ ಭಾನುವಾರ ರಾತ್ರಿಯೇ ಏರ್ ಅಂಬುಲೆನ್ಸ್ ಮೂಲಕ ಅವರ ಪತಿ ಜೊತೆಗೆ ಸ್ವದೇಶಕ್ಕೆ ಮರಳುತ್ತಿದ್ದರು. ಅದರಂತೆಯೇ ಭಾನುವಾರ ಮಧ್ಯರಾತ್ರಿ ಸುಮಾರು 12.30ಕ್ಕೆ ಬ್ರಿಟನ್ ಏರ್ ಅಂಬುಲೆನ್ಸ್ ವಿಮಾನ ನಿಲ್ದಾಣ ಬಂದಿಳಿತ್ತು. ಅಲ್ಲಿಂದ 1.30ಕ್ಕೆ ನಿರ್ಗಮಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಆ್ಯಯನ್ ಲೆವಿಶ್ ಸ್ಮಿತ್ ಅವರ ಜೊತೆ ಪತಿ ಲೆವಿಶ್ ಸ್ಮಿತ್ ಪ್ರಯಾಣಿಸಲಿದ್ದಾರೆ ಎಂದು ವಿ.ವಿ.ರಾವ್ ಸ್ಪಷ್ಟನೆ ಕೊಟ್ಟಿದ್ದಾರೆ.

ಮಹಿಳಾ ರೋಗಿ ಯಾರು?
ಆ್ಯಯನ್ ಲೆವಿಶ್ ಸ್ಮಿತ್ (80) ಹಡಗಿನಲ್ಲಿ ಪ್ರವಾಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಮಹಿಳೆ ಎರಡು ವಾರ ಹಿಂದೆ ನವಮಂಗಳೂರು ಬಂದರಿನಲ್ಲಿಳಿದು ನಗರದ ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ಮಾಡಿದಾಗ ಅವರಲ್ಲಿ ಉಸಿರಾಟದ ಸಮಸ್ಯೆ ಕೂಡ ಇತ್ತು ಎಂದು ತಿಳಿದು ಬಂದಿತ್ತು. ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ನಂತರ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆ್ಯಯನ್ ಅವರಿಗೆ ವಯೋಸಹಜ ಕೆಲವು ಸಮಸ್ಯೆಗಳು ಕಾಡುತ್ತಿದ್ದವು. ಆದ್ದರಿಂದ ಪ್ರವಾಸವನ್ನು ನಿಲ್ಲಿಸಿ ಸ್ವದೇಶಕ್ಕೆ ಹಿಂದಿರುಗಲು ತೀರ್ಮಾನಿಸಿದ್ದರು.

maxresdefault 1

ವಿಮಾನದಲ್ಲಿ ತಾಂತ್ರಿಕ ದೋಷ:
ವಿದೇಶಿ ದಂಪತಿ ಜನವರಿ 24ರಂದು ಸಂಜೆ ಸ್ವದೇಶಕ್ಕೆ ಹೋಗಬೇಕಿದ್ದ ಏರ್ ಅಂಬುಲೆನ್ಸ್ ನಲ್ಲಿ ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಂಡು ಬಂದಿದೆ. ಆದ್ದರಿಂದ ಅದು ಟೇಕಾಫ್ ಆಗಿರಲಿಲ್ಲ. ಆದ್ದರಿಂದ ವಿದೇಶಿ ದಂಪತಿಯ ಪ್ರಯಾಣವನ್ನು ಮುಂದೂಡಲಾಗಿದೆ. ಇದೇ ಮೊದಲ ಬಾರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಿ ಏರ್ ಅಂಬುಲೆನ್ಸ್ ತಾಂತ್ರಿಕ ದೋಷದಿಂದ ಉಳಿದುಕೊಂಡಿದೆ. ಸದ್ಯಕ್ಕೆ ವಿದೇಶಿ ದಂಪತಿ ಹೋಗಲು ಎಲ್ಲ ಪ್ರಕ್ರಿಯೆಗಳು ಮುಗಿದಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *