ರಿಪಬ್ಲಿಕ್ ಡೇಗೆ ಟೀಂ ಇಂಡಿಯಾ ಗಿಫ್ಟ್ – ಕಿವೀಸ್ ವಿರುದ್ಧ ಭರ್ಜರಿ ಗೆಲುವು

Public TV
3 Min Read
indvsnz

ಮೌಂಟ್ ಮೌಂಗಾನೆ : ಇಲ್ಲಿನ ಬೇ ಓವೆಲ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ತೋರಿದ ಟೀಂ ಇಂಡಿಯಾ 90 ರನ್ ಅಂತರದಲ್ಲಿ ಭರ್ಜರಿ ಗೆಲುವು ಪಡೆದಿದೆ.

ಮೊದಲ ಏಕದಿನ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿ ಜಯ ಪಡೆದಿದ್ದ ಟೀಂ ಇಂಡಿಯಾ ಆಟಗಾರರು 2ನೇ ಪಂದ್ಯದಲ್ಲೂ ತಮ್ಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 325 ರನ್ ಗಳ ಬೃಹತ್ ಮೊತ್ತವನ್ನು ನೀಡಿ ಕೇವಲ 234 ರನ್ ಗಳಿಗೆ ಕಿವೀಸ್ ತಂಡವನ್ನು ಆಲೌಟ್ ಮಾಡುವ ಮೂಲಕ 5 ಪಂದ್ಯಗಳ ಟೂರ್ನಿಯಲ್ಲಿ 2-0 ಮುನ್ನಡೆ ಪಡೆದಿದ್ದಾರೆ.

indvsnz 2 odi 3

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಟೀಂ ಇಂಡಿಯಾ ನಾಯಕ ಕೊಹ್ಲಿ ನಿರ್ಧಾರವನ್ನು ಸಮರ್ಥಿಸುವಂತೆ ಆರಂಭಿಕರು ಬ್ಯಾಟ್ ಬೀಸಿದರು. ಆರಂಭಿಕರಾದ ರೋಹಿತ್ ಶರ್ಮಾ 87 (96 ಎಸೆತ, 9 ಬೌಂಡರಿ, 3 ಸಿಕ್ಸರ್) ರನ್ ಸಿಡಿಸಿ ವೃತ್ತಿ ಜೀವನದ 38ನೇ ಅರ್ಧ ಶತಕ ಪೂರೈಸಿದರೆ, ಶಿಖರ್ ಧವನ್‍ರ 66 ರನ್ (67 ಎಸೆತ, 9 ಬೌಂಡರಿ) 27 ನೇ ಅರ್ಧ ಶತಕ ಸಿಡಿಸಿ ಭಾರತ ಬೃಹತ್ ಮೊತ್ತ ಗಳಿಸಲು ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‍ಗೆ ಈ ಇಬ್ಬರ ಜೋಡಿ ಬರೋಬ್ಬರಿ 154 ರನ್ ಗಳ ಜೊತೆಯಾಟ ನೀಡಿತ್ತು. ಇತ್ತ ಪಂದ್ಯದಲ್ಲಿ ಮತ್ತೆ ಅರ್ಧ ಶತಕ ವಂಚಿತರಾದ ನಾಯಕ ಕೊಹ್ಲಿ 45 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 42 ರನ್ ಸಿಡಿಸಿದರು. ಕೊಹ್ಲಿಗೆ ಸಾಥ್ ನೀಡಿದ ರಾಯುಡು 49 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ಅರ್ಧ ಶತಕ ಅಂಚಿನಲ್ಲಿ ಎಡವಿದರು.

indvsnz 2 odi 2

ಧೋನಿ ಬಿರುಸಿನ ಆಟ: ಅಂತಿಮ ಹಂತದಲ್ಲಿ ಟೀಂ ಇಂಡಿಯಾ ಸ್ಕೋರ್ ಹೆಚ್ಚಾಗಲು ಕಾರಣರಾದ ಧೋನಿ ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೊಂದಿಗೆ 48 ರನ್ ಸಿಡಿಸಿ ಅಜೇಯರಾಗಿ ಉಳಿದರು. ಜಾಧವ್ ಕೂಡ ಬಿರುಸಿನ ಆಟ ಪ್ರದರ್ಶಿಸಿ 10 ಎಸೆತಗಳಲ್ಲಿ 3 ಬೌಂಡರಿ, ಸಿಕ್ಸರ್ ಸಿಡಿಸಿ 22 ರನ್ ಗಳಿಸಿದರು. ಇದರೊಂದಿಗೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ನಿಗದಿತ 50 ಓವರ್ ಗಳಲ್ಲಿ 324 ರನ್ ಗಳಿಸಿತು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ಮತ್ತು ಲಾಕಿ ಫರ್ಗುಸನ್ ತಲಾ 2 ವಿಕೆಟ್ ಪಡೆದರು.

ಶರ್ಮಾ, ಧವನ್ ದಾಖಲೆಯ ಜೊತೆಯಾಟ: ಟೀಂ ಇಂಡಿಯಾ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ 14ನೇ ಬಾರಿಗೆ ಶತಕದ ಜೊತೆಯಾಟ ನೀಡಿದರು. ಈ ಮೂಲಕ ಟೀಂ ಇಂಡಿಯಾ ಪರ ಹೆಚ್ಚು ಶತಕದ ಜತೆಯಾಟ ನೀಡಿದ್ದ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದರು. ಈ ಜೋಡಿ 14 ಬಾರಿ ಶತಕ ಕೊಡುಗೆ ನೀಡಿದೆ. ಉಳಿದಂತೆ ಟೀಂ ಇಂಡಿಯಾ ಪರ ಸಚಿನ್, ಗಂಗೂಲಿ ಜೋಡಿ 26 ಬಾರಿ ಶತಕದ ಜೊತೆಯಾಟ ನೀಡಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ವಿರಾಟ್ ಹಾಗೂ ರೋಹಿತ್ ಶರ್ಮಾ ಜೋಡಿ 15 ಬಾರಿ ಶತಕದ ಜೊತೆಯಾಟ ನೀಡಿದ್ದಾರೆ.

indvsnz 2 odi 4

ಟೀಂ ಇಂಡಿಯಾ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ಕಿವೀಸ್ ತಂಡ ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿತು. 24.3 ಓವರಗಳಲ್ಲಿ 136 ರನ್ ಗಳಿಗೆ ಅರ್ಧ ಕೀವಿಸ್ ಪಡೆ ಪೆವಿಲಿಯನ್ ಸೇರಿತ್ತು. ನ್ಯೂಜಿಲೆಂಡ್ ಪರ ಮುನ್ರೋ 31 ರನ್, ಲಾಥಮ್ 34 ರನ್, ಬ್ರೇಸ್ವೆಲ್ 57 ರನ್ ಗಳಿಸಿದರು. ಅಂತಿಮವಾಗಿ ಕಿವೀಸ್ 40.2 ಓವರ್ ಗಳಲ್ಲಿ 234 ರನ್ ಗಳಿಗೆ ಸರ್ವಪತನ ಕಂಡಿತು.

ಕುಲ್ದೀಪ್ ಕಮಾಲ್: ತಂಡದ ಪರ ಮತ್ತೊಮ್ಮೆ ಕಮಾಲ್ ಮಾಡಿದ ಕುಲ್ದೀಪ್ ಯಾದವ್ 4 ವಿಕೆಟ್  ಪಡೆದು ಮಿಂಚಿದರು. ಉಳಿದಂತೆ ಭುವನೇಶ್ವರ್ ಕುಮಾರ್ ಹಾಗೂ ಚಹಲ್ ಶಮಿ ತಲಾ 2, ಜಾಧವ್ ಮತ್ತು ಶಮಿ ತಲಾ 1 ವಿಕೆಟ್ ಪಡೆದರು.

indvsnz 2 odi 7

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *