ಕಲಬುರಗಿ: ನಾನು ಒಬ್ಬ ಸಿಂಪಲ್ ಮಿನಿಸ್ಟರ್ ಎಂದು ಹೇಳುವ ಸಮಾಜ ಕಲ್ಯಾಣ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿಯಲ್ಲಿರುವ ಅವರ ಕಾರ್ಯಾಲಯದ ಕಟ್ಟಡದ ನವೀಕರಣಕ್ಕಾಗಿ ಲಕ್ಷ ಲಕ್ಷ ಹಣ ಸುರಿದಿದ್ದಾರೆ.
ತಾನೊಬ್ಬ ಸಿಂಪಲ್ ಮಿನಿಸ್ಟರ್, ತನಗೆ ಹಾರ-ತೂರಾಯಿ ಬೇಡ. ಅದೇ ಹಣ ಸಣ್ಣ-ಪುಟ್ಟ ಅಭಿವೃದ್ಧಿ ಕೆಲಸಕ್ಕೆ ನೀಡಿ ಎಂದು ಪ್ರಿಯಾಂಕ್ ಖರ್ಗೆ ಭಾಷಣ ಬಿಗಿಯುತ್ತಾರೆ. ಆದ್ರೆ ತಮ್ಮ ಕಲಬುರಗಿ ಉಸ್ತುವಾರಿ ಸಚಿವರ ಕಚೇರಿ ಕಟ್ಟಡದ ನವೀಕರಣಕ್ಕಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ 55 ಲಕ್ಷ ಹಣ ಖರ್ಚು ಮಾಡಿದ್ದಾರೆ.
ಕಟ್ಟಡಕ್ಕೆ ಬೇಕಾದ ಕಂಪ್ಯೂಟರ್ ಖರೀದಿ, ಎಸಿ, ಫರ್ನಿಚರ್, ಎಲೆಕ್ಟ್ರಿಕಲ್ ವರ್ಕ್, ಕಟ್ಟಡ ಪ್ಯಾಚಪ್ ವರ್ಕ್ ಎಂದು ಲಕ್ಷಾಂತರ ರೂಪಾಯಿ ದುಂದುವೆಚ್ಚ ಮಾಡಿದ್ದಾರೆ. ಆದ್ರೆ ಇವರು ತಿಂಗಳಿಗೆ ಒಂದು ಬಾರಿ ಈ ಕಚೇರಿಗೆ ಬಂದ್ರೇನೆ ದೊಡ್ಡ ವಿಷಯ. ಹೀಗಿರುವಾಗ ಇಷ್ಟು ಹಣ ಖರ್ಚು ಮಾಡಿ ಕಟ್ಟಡ ನವೀಕರಣ ಮಾಡಿದ್ದು ಯಾಕೆ? ಇದೇ ಹಣವನ್ನು ಜನರ ಅಭಿವೃದ್ಧಿಗೆ ಬಳಸಬಹುದಿತ್ತಲ್ವಾ? ಅಂತ ಜನರು ಸಚಿವರನ್ನು ಟೀಕಿಸುತ್ತಿದ್ದಾರೆ. ಇದೀಗ ಅವರ ಡೈಲಾಗ್ ಅವರಿಗೇ ತಿರುಗಿ ಬಿದ್ದಿದೆ.
ಈ ಕುರಿತು ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ ಮಾತನಾಡಿ, ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ತಮ್ಮ ಕ್ಷೇತ್ರದಲ್ಲಿ ನಾನು ಬಂದರೇ ಯಾವುದೇ ದುಂದುವೆಚ್ಚ ಮಾಡಬೇಡಿ, ನಾನೊಬ್ಬ ಸಾಮಾನ್ಯ ಸಚಿವ ಅಂತ ತಮ್ಮ ಪ್ರಚಾರಕ್ಕಾಗಿ ಡ್ರಾಮಾ ಮಾಡಿಕೊಂಡು ಹೋಗುತ್ತಿದ್ದಾರೆ. ಯಾವಗಲೋ ಒಮ್ಮೆ ಕಚೇರಿಗೆ ಬರುವ ಪ್ರಿಯಾಂಕ್ ಖರ್ಗೆ ಅವರು ಲಕ್ಷಾಂತರ ರೂಪಾಯಿ ಕಟ್ಟಡ ನವೀಕರಣಕ್ಕೆ ಖರ್ಚು ಮಾಡುತ್ತಿದ್ದಾರೆ. ಆ ದುಡ್ಡು ಯಾರದ್ದು? ಅದು ಜನಸಾಮಾನ್ಯರು ತುಂಬಿರುವ ತೆರಿಗೆ ಹಣ. ಅದನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಮಾಧ್ಯಮಗಳನ್ನು ಉಗ್ರಗಾಮಿಗಳಿಗೆ ಹೋಲಿಸುವ ಪ್ರಿಯಾಂಕ್ ಖರ್ಗೆ ಜನರ ತೆರಿಗೆ ಹಣ ಉಳಿಸಬೇಕು, ನಂತರ ಮತದಾರರಿಗೆ ನೀತಿ ಪಾಠ ಮಾಡಲು ಮುಂದಾಗಬೇಕು ಎಂದು ಎಲ್ಲರೂ ಮಾತನಾಡುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv