ಕಣ್ಮನ ಸೆಳೆಯುವ ಸೌಂದರ್ಯಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್

Public TV
3 Min Read
collage

ನಾವು ಚೆನ್ನಾಗಿ ಕಾಣಬೇಕು ಅಂತ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಎಲ್ಲರೂ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು, ಇನ್ನೂ ಚೆನ್ನಾಗಿ ಕಾಣಬೇಕು ಅಂತ ಅದೆಷ್ಟೋ ದುಬಾರಿ ಔಷಧಿಗಳನ್ನ, ಕ್ರೀಮ್‍ಗಳನ್ನ ಹಾಗೂ ಕೆಮಿಕಲ್ ಮಿಶ್ರಿತ ಕಾಸ್ಮೆಟಿಕ್ಸ್‍ಗಳನ್ನು ಬಳಸುತ್ತಾರೆ. ಅದರಲ್ಲೂ ಮಹಿಳೆಯರು ಸೌಂದರ್ಯದ ವಿಷಯದಲ್ಲಿ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್, ಶ್ಯಾಂಪೂ, ಸ್ಕ್ರಬ್ ಅಂತ ಸಾಕಷ್ಟು ಹಣ ಖರ್ಚು ಮಾಡ್ತಾರೆ. ಇದೆಲ್ಲ ಸಾಲಲ್ಲ ಅಂತ ಬ್ಯೂಟಿ ಪಾರ್ಲರ್‍ಗೆ ಹೋಗಿ ಬ್ಯೂಟಿಷನ್ ಸಲಹೆ ಪಡೆಯುತ್ತಾರೆ.

ಮಾರುಕಟ್ಟೆಯಲ್ಲಿ ವಿಧವಿಧವಾದ ಬ್ಯೂಟಿ ಪ್ರೊಡಕ್ಟ್ಸ್ ದೊರೆಯುತ್ತದೆ. ಅದರಲ್ಲಿ ಕೆಮಿಕಲ್ ಅಂಶ ಸಾಕಷ್ಟು ಇರುತ್ತೆ, ಇದರಿಂದ ತ್ವಚೆಯ ಸೌಂದರ್ಯ ಹಾಳಾಗುತ್ತದೆ. ಅಲ್ಲದೆ ಆರೋಗ್ಯದ ಮೇಲೂ ಈ ಪ್ರೊಡಕ್ಟ್ಸ್ ಪರಿಣಾಮ ಬೀರುತ್ತೆ. ಆದ್ರೆ ಇತ್ತೀಚೆಗೆ ಇವನ್ನೆಲ್ಲ ಅರಿತ ಜನರು ನೈಸರ್ಗಿಕವಾಗಿ ತಯಾರಾಗುವ ಬ್ಯೂಟಿ ಪ್ರೊಡಕ್ಟ್ಸ್ ಗಳ ಮೊರೆ ಹೋಗ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ನೈರ್ಸಗಿಕ ಅಂತ ಹೆಸರಿನಲ್ಲಿ ವಂಚನೆ ಮಾಡುತ್ತಿರೋ ಪ್ರೊಡಕ್ಟ್ಸ್ ಗಳ ಸಂಖ್ಯೆಯೇ ಹೆಚ್ಚಾಗಿದೆ.

ಏನಪ್ಪಾ ಮಾಡೋದು, ಹೇಗೆ ನ್ಯಾಚುರಲ್ ಆಗಿ ಸೌಂದರ್ಯ ಪಡೆಯೋದು ಅಂತ ಯೊಚನೆ ಮಾಡ್ತಿದ್ದೀರಾ? ಇನ್ಮುಂದೆ ಆ ಚಿಂತೆ ಬಿಡಿ. ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು, ಎಲ್ಲರ ಕಣ್ಮನ ಸೆಳೆಯುವ ಆಕರ್ಷಕ ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಲು ನೈಸರ್ಗಿಕವಾದ ಸುಲಭವಾದ ಬ್ಯೂಟಿ ಟಿಪ್ಸ್‍ಗಳು ಇಲ್ಲಿದೆ.

5 ನ್ಯಾಚುರಲ್ ಬ್ಯೂಟಿ ಟಿಪ್ಸ್ ಯಾವುದು?

1. ಕೂದಲ ಸೌಂದರ್ಯಕ್ಕೆ ಬಾಳೆಹಣ್ಣು ಮತ್ತು ಮೊಟ್ಟೆ ಹೇರ್ ಮಾಸ್ಕ್:
ಕೂದಲು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲು ಉದುರುತ್ತಿದೆ, ಡ್ಯಾಮೇಜ್ ಆಗಿದೆ. ಆದ್ರೆ ಏನ್ ಮಾಡೋದು ಎಂದು ಚಿಂತೆ ಮಾಡೋದನ್ನ ಬಿಡಿ. ಇದಕ್ಕೆ ನಮ್ಮ ಬಳಿ ಒಂದು ಸಿಂಪಲ್ ಔಷಧಿ ಇದೆ. ಅದೇ ಬಾಳೆಹಣ್ಣು ಮತ್ತು ಮೊಟ್ಟೆ ಹೇರ್ ಮಾಸ್ಕ್. ಒಂದು ಕೋಳಿ ಮೊಟ್ಟೆ ಜೊತೆಗೆ ಬಾಳೆಹಣ್ಣನ್ನು ಸ್ಮ್ಯಾಷ್ ಮಾಡಿ. ಬಳಿಕ ಸ್ವಲ್ಪ ಗಟ್ಟಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಆ ಮಿಶ್ರಣವನ್ನು ನಿಮ್ಮ ತಲೆಗೆ ಹಾಗೂ ಕೂದಲಿಗೆ ಹಚ್ಚಿಕೊಂಡು 10ರಿಂದ 30 ನಿಮಿಷ ಹಾಗೆಯೇ ಬಿಡಿ. ನಂತರ ತಲೆ ಸ್ನಾನ ಮಾಡಿ. ಹೀಗೆ ವಾರಕ್ಕೆ ಒಮ್ಮೆ ಈ ಹೇರ್ ಮಾಸ್ಕ್ ಬಳಸಿದರೆ ಕೂದಲ ಅಂದ ಚೆಂದ ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

banana egg college

2. ಸಿಂಪಲ್ ಜೇನುತುಪ್ಪ ಫೇಸ್ ಪ್ಯಾಕ್:
ಶುದ್ಧ ಜೇನುತುಪ್ಪದಲ್ಲಿ ನೈಸರ್ಗಿಕವಾದ ಬ್ಯಾಕ್ಟಿರಿಯಾ ವಿರುದ್ಧ ಹೊರಾಡುವ ಶಕ್ತಿ ಇರುತ್ತದೆ. ಅಲ್ಲದೆ ವೇಗವಾಗಿ ಕೋಮಲ ತ್ವಚೆ ಹಾಗೂ ಆಕರ್ಷಕ ಸೌಂದರ್ಯ ಪಡೆಯಲು ಇದು ಸಹಾಯ ಮಾಡುತ್ತದೆ. ವಾರಕ್ಕೊಮ್ಮೆ ಒಂದು ಚಮಚ ಶುದ್ಧ ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಬೇಕು. 5-10 ನಿಮಿಷ ಅದನ್ನ ಹಾಗೆ ಬಿಡಬೇಕು. ಬಳಿಕ ಉಗುರು ಬೆಚ್ಚನೆಯ ನೀರಲ್ಲಿ ಮುಖ ತೊಳೆದರೆ, ಡ್ರೈ ಸ್ಕಿನ್ ನಿವಾರಣೆಯಾಗಿ ತ್ವಚೆಯ ಕಾಂತಿ ಹೆಚ್ಚಾಗುತ್ತದೆ.

honey college

3. ಬಾಡಿ ಸ್ಕ್ರಬ್:
2-3 ಚಮಚ ಆಲಿವ್ ಎಣ್ಣೆಗೆ ಸ್ವಲ್ಪ ಕಲ್ಲುಪ್ಪು ಬೆರೆಸಬೇಕು. ಬಳಿಕ ಈ ಮಿಶ್ರಣವನ್ನು ಇಡೀ ಮೈಗೆ ಹಚ್ಚಿ ಮಸಾಜ್ ಮಾಡಬೇಕು. 10- 30 ನಿಮಿಷಗಳ ಬಳಿಕ ಸ್ನಾನ ಮಾಡಿ. ಹೀಗೆ ವಾರಕ್ಕೆ 1-2 ಬಾರಿ ಮಾಡಿದರೆ ಡೆಡ್ ಸ್ಕಿನ್ ಹೋಗಿ ಕೋಮಲ ತ್ವಚೆ ನಿಮ್ಮದಾಗುತ್ತದೆ. ಅಷ್ಟೇ ಅಲ್ಲದೆ ಆಲಿವ್ ಎಣ್ಣೆಯನ್ನು ಆಹಾರದಲ್ಲಿ ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

salt olive oil

4. ನ್ಯಾಚುರಲ್ ಕಂಡಿಷನರ್:
ತೆಂಗಿನ ಎಣ್ಣೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇರುತ್ತದೆ. ತಲೆ ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿ. ಬಳಿಕ ನಿಮ್ಮ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ನಂತರ 2-3 ಗಂಟೆಗಳು ಹಾಗೆಯೇ ಬಿಡಿ, ಬಳಿಕ ಶೀಗೆಕಾಯಿ ಅಥವಾ ಕಡಿಮೆ ಕೆಮಿಕಲ್ ಇರುವ ಶ್ಯಾಂಪೂವನ್ನು ಬಳಸಿ ತಲೆ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ. ಅಲ್ಲದೇ ಕೂದಲ ಅಂದವೂ ಹೆಚ್ಚಾಗುತ್ತದೆ.

coconut oil 1 college

5. ಸಿಂಪಲ್ ಶೇವಿಂಗ್ ಕ್ರೀಮ್:
ಶೇವ್ ಮಾಡುವಾಗ ಅನೇಕ ಶೇವಿಂಗ್ ಕ್ರೀಮ್‍ಗಳನ್ನು ಬಳಸುತ್ತೇವೆ. ಇಂತಹ ಕ್ರೀಮ್‍ಗಳಲ್ಲಿ ಕೆಮಿಕಲ್ ಅಂಶ ಹೆಚ್ಚಾಗಿರುತ್ತದೆ. ಇದರಿಂದ ತ್ವಚೆಗೆ ಹಾನಿ ಉಂಟಾಗುತ್ತದೆ. ಉತ್ತಮ ಆರೋಗ್ಯಕರ ತ್ವಚೆಯನ್ನು ಪಡೆಯಲು ತೆಂಗಿನ ಎಣ್ಣೆ ಸಹಾಯ ಮಾಡುತ್ತದೆ. ಹೌದು ಶೇವ್ ಮಾಡಿದ ನಂತರ ಸ್ವಲ್ಪ ತೆಂಗಿನ ಎಣ್ಣೆಯನ್ನು ಶೇವ್ ಮಾಡಿದ ಭಾಗಕ್ಕೆ ಹಚ್ಚಿ, 5 – 10 ನಿಮಿಷದ ಬಳಿಕ ಮುಖ ತೊಳೆದರೆ ತ್ವಚೆಗೆ ಒಳ್ಳೆಯದು.

ಹೀಗೆ ಮನೆಯಲ್ಲಿ ಸಿಗುವ ಸಿಂಪಲ್ ಪದಾರ್ಥಗಳನ್ನು ಬಳಸಿ ನಿಮ್ಮ ಸೌಂದರ್ಯದ ಆರೈಕೆ ಮಾಡಿ. ಕೆಮಿಕಲ್ ಮಿಶ್ರಿತ ಬ್ಯೂಟಿ ಪ್ರೊಡಕ್ಟ್ಸ್ ಗಳ ಬಳಕೆ ಕಡಿಮೆ ಮಾಡಿ ನೈಸರ್ಗಿಕ ಪದಾರ್ಥವನ್ನು ಬಳಸಿದರೆ ತ್ವಚೆ ಹಾಗೂ ದೇಹದ ಸೌಂದರ್ಯವನ್ನು ಸುಲಭವಾಗಿ ವೃದ್ಧಿಸಿಕೊಳ್ಳಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *