ತುಮಕೂರು: ನಡೆದಾಡುವ ದೇವರು, ಶತಮಾನದ ಸಂತ, ಶತಾಯುಷಿ ಶ್ರೀ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿದ್ದು, ಲಿಂಗಾಯತ ಸಂಪ್ರದಾಯದಂತೆ ಶ್ರೀಗಳ ಕ್ರಿಯಾ ಸಮಾಧಿ ನೆರವೇರಲಿದೆ.
ಇಂದು ಸಂಜೆ 4 ಗಂಟೆ 30 ನಿಮಿಷಕ್ಕೆ ಕ್ರಿಯಾ ಸಮಾಧಿ ನಡೆಯಲಿದೆ. ಹಳೆಯ ಮಠಕ್ಕೆ ಅಂಟಿಕೊಂಡಂತೆ ಗದ್ದುಗೆ ನಿರ್ಮಾಣವಾಗಿದ್ದು, ಶ್ರೀಗಳು ಈ ಸ್ಥಳದಲ್ಲಿ ಲಿಂಗೈಕ್ಯವಾಗಿ ಲಿಂಗದ ರೂಪದಲ್ಲಿ ದರ್ಶನ ನೀಡಲಿದ್ದಾರೆ. ಶ್ರೀಗಳು ಲಿಂಗೈಕ್ಯರಾಗಲಿರುವ ಗರ್ಭಗುಡಿಯಲ್ಲಿ 12 ಅಡಿ ಆಳದ ಸಮಾಧಿ ಗುಂಡಿ ತೆಗೆಯಲಾಗಿದೆ.
ಶ್ರೀಗಳ ಕ್ರಿಯಾ ಸಮಾಧಿ ನಡೆಯಲಿರುವ ಭವನವನ್ನು ತಳಿರು ತೋರಣ, ಹೂಗಳಿಂದ ಅಲಂಕರಿಸಲಾಗುತ್ತಿದೆ. ಸಿದ್ದಗಂಗಾ ಶ್ರೀಗಳ ಸಮಾಧಿ ಕಾರ್ಯದ ವೇಳೆ ವಿಭೂತಿ ಗಟ್ಟಿ ಮತ್ತು ಉಪ್ಪನ್ನು ಬಳಸಲಾಗುತ್ತದೆ. ಗದ್ದುಗೆಯ ಗರ್ಭಗುಡಿಯಲ್ಲಿ. ಸ್ಥಳಶುದ್ಧಿ, ಪಂಚಕಳಸ ಪೂಜೆ, ಅಷ್ಟ ದಿಕ್ಪಾಲಕರು, ಸಪ್ತರ್ಷಿಗಳ ಪೂಜೆ ನಡೆಯಲಿದೆ.
ತಮ್ಮ ಗುರುಗಳಾದ ಉದ್ಧಾನ ಶಿವಯೋಗಿಗಳ ಗದ್ದುಗೆಯ ಪಕ್ಕದಲ್ಲೇ ಸಿದ್ದಗಂಗಾ ಶ್ರೀ ಚಿರಸ್ಥಾಯಿಯಾಗಲಿದ್ದಾರೆ. 70ನೇ ವರ್ಷದಲ್ಲಿದ್ದಾಗ ಶ್ರೀಗಳು ಐಕ್ಯವಾಗುವ ಸ್ಥಳವನ್ನು ಸೂಚಿಸಿದ್ದರು. ಈ ಸ್ಥಳ ಸೂಚಿಸಲು ಕಾರಣವಿದೆ. ಐಕ್ಯ ಸ್ಥಳಕ್ಕಾಗಿ ಜಾಗ ಹುಡುಕುತ್ತಿದ್ದಾಗ ತಮ್ಮ ಗುರುಗಳಾದ ಉದ್ಧಾನ ಶಿವಯೋಗಿಗಳು ನೀರನ್ನು ಎರೆದು ಪೋಷಿಸಿದ್ದ ಬೃಹತ್ ಆಲದ ಮರ ಉರುಳಿಬಿದ್ದಿತ್ತು. ಈ ಸ್ಥಳವನ್ನು ಶ್ರೀಗಳು ಆಯ್ಕೆ ಮಾಡಿದ್ದರು.
1982ರಲ್ಲಿ ಭವನ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಆಗ ಕನಕಪುರದ ದೇಗುಲ ಮಠದ ಇಮ್ಮಡಿ ಮಹಾಲಿಂಗ ಸ್ವಾಮೀಜಿ ಈ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಸಿದ್ದಗಂಗಾ ಶ್ರೀ ಮತ್ತು ಮಹಾಲಿಂಗ ಸ್ವಾಮೀಜಿ ಇಬ್ಬರೂ ಉದ್ಧಾನ ಶಿವಯೋಗಿಗಳ ಶಿಷ್ಯರಾಗಿದ್ದರು. ಕಾರಣಾಂತರಗಳಿಂದ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಕೆಲಸ ಕೆಲ ವರ್ಷಗಳಿಂದ ವೇಗವಾಗಿ ಸಾಗಿ ಎರಡು ವರ್ಷಗಳ ಹಿಂದೆಯಷ್ಟೇ ಗದ್ದುಗೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿತ್ತು.
ಗದ್ದುಗೆಯ ವಿಶೇಷತೆ ಏನು?
ಗದ್ದುಗೆ ನಾಲ್ಕು ಮೂಲೆಗಳಲ್ಲಿ ಕರಡಿಗೆಯ ಚಿತ್ರವನ್ನು ಕೆತ್ತಲಾಗಿದೆ. ಈ ಭವನ ಸಂಪೂರ್ಣ ಅಮೃತಶಿಲೆಯಿಂದ ನಿರ್ಮಾಣಗೊಂಡಿದೆ. ಸ್ವಾಮೀಜಿ ನಿತ್ಯ ಓಡಾಡುತ್ತಿದ್ದ ತೇರಿನ ಬೀದಿಯಲ್ಲೇ ಈ ಭವನ ಇದೆ. ಲಿಂಗೈಕ್ಯರಾಗಲಿರುವ ಗದ್ದುಗೆ ಗರ್ಭಗುಡಿ ಶಿಲಾ ಬಾಗಿಲ ಮೇಲೆ 26 ದೇವರನ್ನು ಕೆತ್ತಲಾಗಿದೆ. ಬಾಗಿಲ ಎಡ, ಬಲ ಭಾಗದಲ್ಲಿ ಅಷ್ಟ ದಿಕ್ಪಾಲಕರು, ಸಿದ್ದಗಂಗಾ ಮಠದ ದೇವರಾದ ಸಿದ್ದಲಿಂಗೇಶ್ವರ ಸ್ವಾಮೀಜಿ, ಬಸವಣ್ಣ, ಲಿಂಗೈಕ್ಯ ಗೋಸಲ ಸಿದ್ದೇಶ್ವರ, ಉದ್ದಾನ ಶಿವಯೋಗಿ, ಯಡಿಯೂರು ಸಿದ್ದಲಿಂಗೇಶ್ವರ, ಅಟವಿ ಶಿವಯೋಗಿ, ಬೇಡರ ಕಣ್ಣಪ್ಪ, ಅಕ್ಕಮಹಾದೇವಿ ಸೇರಿದಂತೆ 26 ಮೂರ್ತಿಗಳನ್ನು ಕೆತ್ತಲಾಗಿದೆ.