2011ರಲ್ಲೇ ಕಿರಿಯ ಶ್ರೀಗಳಿಗೆ ಮಠದ ಅಧಿಕಾರ ಹಸ್ತಾಂತರಿಸಿದ್ದರು ಶ್ರೀಗಳು!

Public TV
3 Min Read
KIRIYA SWAMIJI

ತುಮಕೂರು: ಏಳು ಶತಮಾನಗಳ ಐತಿಹ್ಯ ಹೊಂದಿರುವ ಶ್ರೀ ಸಿದ್ದಗಂಗಾ ಕ್ಷೇತ್ರದಲ್ಲಿ 2011ರ ಆಗಸ್ಟ್ 4 ರಂದು ಹಸ್ತ ನಕ್ಷತ್ರ ನಾಗರ ಪಂಚಮಿಯಂದು ಶ್ರೀ ಶಿವಕುಮಾರ ಮಹಾಸ್ವಾಮೀಜಿ ಶ್ರೀ ಕ್ಷೇತ್ರದ ಉತ್ತರಾಧಿಕಾರಿಗಳೂ ಹಾಗೂ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮಿಗಳಿಗೆ ಸಿದ್ದಗಂಗಾ ಮಠದ ಅಧಿಕಾರವನ್ನು ಅಧಿಕೃತ ಛಾಪಾ ಕಾಗದದ ಮೂಲಕ ಹಸ್ತಾಂತರಿಸಿದರು.

ಅಧಿಕಾರ ಹಸ್ತಾಂತರಕ್ಕೂ ಮುನ್ನ ತಮ್ಮ ಕಚೇರಿಯಲ್ಲಿ ಕಿರಿಯ ಸ್ವಾಮೀಜಿಯವರ ಹೆಸರಿಗೆ ಬರೆಸಿದ ಉಯಿಲನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರಿಂದ ಓದಿಸಲಾಯಿತು. ಜೊತೆಗೆ ಶ್ರೀ ಶಿವಕುಮಾರ ಸ್ವಾಮೀಜಿಯವರೂ ಸಹ ಒಮ್ಮೆ ಓದಿ ಸಹಿ ಹಾಕಿದರು. ಅಪಾರ ಭಕ್ತರು ಭಾವುಕರಾಗಿ ಕಾರ್ಯಕ್ರಮದಲ್ಲಿ ಸಾಕ್ಷಿಯಾದರು. ಅಧಿಕಾರ ಹಸ್ತಾಂತರ ಮಾಡಿದ ಶ್ರೀಗಳು ಆಶೀರ್ವಚನ ನೀಡಿದರು.

sri 6

ಆಶೀರ್ವಚನದಲ್ಲಿ ಹೇಳಿದ್ದು ಏನು?
ಭಗವಂತನ ಸೃಷ್ಟಿಯಲ್ಲಿ ಮನುಷ್ಯನಿಗೆ ಶ್ರೇಷ್ಠವಾದ ಸ್ಥಾನವಿದೆ. ಅದನ್ನು ಅರಿತು ನಡೆದುಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಮನುಷ್ಯತ್ವ ಬೆಳೆಯಲು ಧರ್ಮಪೀಠಗಳು ನೆರವಾಗಬೇಕು. ಭಕ್ತರಲ್ಲಿ ಸಮಾಜಮುಖಿ ಭಾವನೆ ಬೆಳೆಸುವುದು ಧರ್ಮಪೀಠಗಳ ಕರ್ತವ್ಯ. ಭ್ರಷ್ಟಾಚಾರದ ಪಿಡುಗು ತೊಲಗಿಸಲು ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ವಯಸ್ಸಿನಿಂದಲೇ ದೇಶದ ಬಗ್ಗೆ ನಿಷ್ಠೆ ಹಾಗೂ ಉದಾತ್ತ ಭಾವನೆ ಬೆಳೆಸಬೇಕು. ಶಿಕ್ಷಣದಿಂದ ಈ ಬದಲಾವಣೆ ಸಾಧ್ಯ. ಯಾರೂ ಯಾವುದೇ ಒಂದು ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಹಲವು ಟೀಕೆ ಟಿಪ್ಪಣಿಗಳು ಬರುತ್ತವೆ. ಅವುಗಳನ್ನು ಲೆಕ್ಕಿಸದೇ ಸಮಾಜದ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ. ಅಂತಹ ದಕ್ಷತೆಯನ್ನು ಬೆಳೆಸಿಕೊಳ್ಳಲು ಕೆಲವು ತತ್ವಗಳನ್ನು ಅರಿಯಬೇಕಾಗಿದೆ. ಮನುಷ್ಯ, ಮನುಷ್ಯನಿಗಾಗಿ ಬಾಳಬೇಕು. ಮಾನವ ಧರ್ಮಕ್ಕೆ ಬದ್ಧರಾದರೆ ಬಡತನ, ದಾರಿದ್ರ್ಯ, ಭ್ರಷ್ಟತೆಗಳು ತಾನಾಗಿಯೇ ಕಣ್ಮರೆಯಾಗುತ್ತದೆ. ಈ ನಿಟ್ಟಿನಲ್ಲಿ ಕಿರಿಯ ಶ್ರೀಗಳು ತಮ್ಮ ಜವಾಬ್ದಾರಿಯನ್ನು ಸುಸೂತ್ರವಾಗಿ ನಿರ್ವಹಿಸಲಿದ್ದಾರೆ ಎಂಬ ನಂಬಿಕೆ ನನ್ನಲ್ಲಿದೆ.

TMK SHREE

ಶ್ರೀ ಮಠದ ಕಾರ್ಯವ್ಯಾಪ್ತಿಗಳು ದಿನೇ ದಿನೇ ವಿಸ್ತಾರವಾಗುತ್ತಾ ನಡೆದಿವೆ. ವಿದ್ಯಾಸಂಸ್ಥೆಗಳು ಅಧಿಕಗೊಂಡಿವೆ. ಭಕ್ತರು ಸಂಪತ್ತು ಅಪಾರವಾಗಿ ಬೆಳೆದಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಸಭೆ-ಸಮಾರಂಭಗಳು, ಭಕ್ತರ ಮನೆಯ ಆಹ್ವಾನಗಳು ದಿನೇ ದಿನೇ ಅಧಿಕವಾಗುತ್ತಿವೆ. ನಮಗೆ ಈ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ವಯೋಧರ್ಮದಿಂದ ಸಾಧ್ಯವಾಗುತ್ತಿಲ್ಲ. ಈ ಇಳಿ ವಯಸ್ಸಿನಲ್ಲಿ ದೇಹಧರ್ಮ ಸಹಜವಾಗಿ ಕಾರ್ಯ ನಿರ್ವಹಿಸುವಲ್ಲಿ ಆಶಕ್ತವಾಗಿದೆ. ಈ ಎಲ್ಲಾ ಅಂಶಗಳನ್ನು ಮನಗಂಡು ನಮ್ಮ ಉತ್ತಾರಾಧಿಕಾರಿಗಳಾಗಿರುವ ಶ್ರೀ ಸಿದ್ದಲಿಂಗಸ್ವಾಮಿ ಅವರಿಗೆ ಶ್ರೀ ಮಠದ ಮಠಾಧ್ಯಕ್ಷತೆಯನ್ನು ವಹಿಸಿಕೊಟ್ಟು, ನಡೆಸಿಕೊಂಡು ಹೋಗಲು ಬಿಟ್ಟುಕೊಟ್ಟಲ್ಲಿ ಮಠದ ಎಲ್ಲಾ ಕೆಲಸ ಕಾರ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತದೆಂಬ ಸದ್ಭಾವನೆ ನಮ್ಮಲ್ಲಿ ಇದೆ. ಈ ಲೌಕಿಕ ವ್ಯವಹಾರಗಳಿಂದ ನಿವೃತ್ತಿ ಹೊಂದಿ ಆಧ್ಯಾತ್ಮಿಕ ಸಂಪತ್ತನ್ನು ಭಕ್ತಾದಿಗಳಿಗೆ ನೀಡಿ ಅವರಲ್ಲಿ ಪೂಜಾ ನಿಷ್ಠೆಯನ್ನು ಬೆಳೆಸಿ, ಸಮಾಜಕ್ಕೆ ಯೋಗ್ಯ ಮಾರ್ಗದರ್ಶನ ಮಾಡಬೇಕೆಂಬ ಆಸಕ್ತಿಯುಳ್ಳವರಾಗಿರುತ್ತೇವೆ.

SRII copy 1

ಶ್ರೀ ಸಿದ್ದಲಿಂಗಸ್ವಾಮೀಜಿಯವರು ಅಂದಿನಿಂದ ಇಂದಿನವರೆಗೆ ನಮ್ಮ ಆಜ್ಞಾನುಸಾರ ನಡೆದುಕೊಳ್ಳುತ್ತಿದ್ದಾರೆ. ಮಠದ ಕಾರ್ಯಗಳನ್ನು ಸದಾಚಾರ, ಗುರುನಿಷ್ಠೆ ಮತ್ತು ಪೂಜಾ ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಮಠದ ಪವಿತ್ರ ಪರಂಪರೆಯನ್ನು ಮುಂದುವರಿಸಿಕೊಂಡು, ಚಾರಿತ್ರ್ಯ ಸಂಪನ್ನರಾಗಿ ರೂಪುಗೊಂಡಿದ್ದಾರೆ. ಸಿದ್ದಲಿಂಗ ಸ್ವಾಮೀಜಿಗೆ ಅಧಿಕಾರ ವಹಿಸಿಕೊಟ್ಟರೆ ಮಠದ ಶ್ರೇಯೋಭಿವೃದ್ಧಿಯಾಗುತ್ತದೆ ಎಂಬ ಬಗ್ಗೆ ದೃಢ ನಂಬಿಕೆ ಇದೆ.

ಈ ಎಲ್ಲಾ ಅಂಶಗಳನ್ನು ಮನಗಂಡು, ನಮಗೆ ಈಗಾಗಲೇ 103 ಸಂವತ್ಸರಗಳು ತುಂಬಿದ್ದು, 104ನೇ ಸಂವತ್ಸರಗಳಲ್ಲಿ ಇರುವುದರಿಂದ ಹಾಗೂ ಕಳೆದು 2-3 ಮಾಸಗಳಿಂದ ಪದೇ ಪದೇ ದೇಹಾಲಸ್ಯ ಉಂಟಾಗುತ್ತಿರುವುದರಿಂದ, ಹೊರಗಡೆ ದೂರ ಪ್ರಯಾಣ ಮಾಡಲು ಹಾಗೂ ಭಕ್ತರ ಕೋರಿಕೆಯನ್ನು ನೆರವೇರಿಸಲು ಕಷ್ಟಕರವಾಗುತ್ತಿರುವುದರಿಂದ, ಶ್ರೀ ಮಠದ ದೈನಂದಿನ ಕಾರ್ಯಕ್ರಮಗಳಿಗೆ ಮತ್ತು ಶ್ರೇಯೋಭಿವೃದ್ಧಿಗೆ ಕುಂದು ಬಾರದಿರಲೆಂಬ ಸದುದ್ದೇಶದಿಂದ ಹರಗುರು ಚರಮೂರ್ತಿಗಳು, ಮಠಾಧ್ಯಕ್ಷರುಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಈ ದಿನ ಅಂದರೆ 2011ರ ಆಗಸ್ಟ್ 4 ರಂದು ನಮ್ಮ ಉತ್ತರಾಧಿಕಾರಿಯಾಗಿ ಮುಂದುವರಿದಿರುವ ಶ್ರೀ ಸಿದ್ದಲಿಂಗಸ್ವಾಮಿ ಅವರನ್ನ, ಶ್ರೀ ಮಠದ ಘನತೆ, ಗೌರವ, ಪ್ರತಿಷ್ಠೆಗಳಿಗೆ ಕುಂದುಬಾರದಂತೆ ನಡೆಸಿಕೊಂಡು ಹೋಗಲು ಹಾಗೂ ಶ್ರೀ ಸಿದ್ದಗಂಗಾ ಮಠದ ಮಠಾಧ್ಯಕ್ಷತೆಯನ್ನು ವಹಿಸಿಕೊಟ್ಟು ಅವರನ್ನು ಮಠಾಧ್ಯಕ್ಷರನ್ನಾಗಿ ನೇಮಿಸಿ ಆಶೀರ್ವದಿಸಿರುವೆ.

https://www.youtube.com/watch?v=SQorcppSI_8

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *