ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಸೇವೆಯ ಬೀಜಾಂಕುರವಾಗಿದ್ದು 1913 ರಲ್ಲಿ. ಸಿದ್ದಗಂಗಾ ಶ್ರೀಗಳ ಧರ್ಮಸ್ವೀಕಾರದ ನಂತರ ಸರಸ್ವತಿ ಶಾಶ್ವತವಾಗಿ ನೆಲೆಸಿದಳು. ವಿದ್ಯಾಬಿಕ್ಷೆ ಕೊಟ್ಟ ಶ್ರೀಗಳು ಲಕ್ಷ ಲಕ್ಷ ಜನರ ಪಾಲಿಗೆ ಜ್ಞಾನ ಗಂಗೆಯನ್ನು ಧರೆಗಿಳಿಸಿದ ದೇವರಾದರು.
ಸಂಸ್ಕೃತವೆಂದರೆ ಒಂದು ವರ್ಗದರಿಗೆ ಮಾತ್ರ ಎಂಬಂತೆ ಇದ್ದ ಸನ್ನಿವೇಶದಲ್ಲಿ ಸಿದ್ದಗಂಗೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಜಾತಿ ಮತ ಧರ್ಮ ಪಂಥ ಎಲ್ಲವನ್ನು ಮೀರಿ ಸಂಸ್ಕೃತಾಭ್ಯಾಸಕ್ಕೆ ಅವಕಾಶ ಕಲಿಸಿಕೊಟ್ಟಿರುವುದು ಒಂದು ದಾಖಲೆ. 20 ವಿದ್ಯಾರ್ಥಿಗಳಿಂದ ಆರಂಭಿಸಿದ ಶ್ರೀ ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಇದು ಬಹುಶಃ ದೊಡ್ಡದಾದ ಮಹಾವಿದ್ಯಾಲಯವಾಗಿ ಬೆಳೆದಿರುವುದೇ ಇದಕ್ಕೆ ಸಾಕ್ಷಿ. ಇದನ್ನೂ ಓದಿ:2011ರಲ್ಲೇ ಕಿರಿಯ ಶ್ರೀಗಳಿಗೆ ಮಠದ ಅಧಿಕಾರ ಹಸ್ತಾಂತರಿಸಿದ್ದರು ಶ್ರೀಗಳು!
ಶ್ರೀಮಠದ ಸೇವೆಗೆ ಸಿದ್ದಗಂಗಾ ಶ್ರೀ ನಿಂತ ನಂತರ ಸಿದ್ದಗಂಗಾ ಕ್ಷೇತ್ರದ ಶಿಕ್ಷಣ ಸೇವೆ ಮಹಾ ವೃಕ್ಷವಾಗಿ ಬೆಳೆಯತೊಡಗಿತ್ತು. ಗ್ರಾಮೀಣ ಜನರ ಬದುಕಿನ ಸುಧಾರಣೆ ಆಗಬೇಕಾದರೆ ಶಿಕ್ಷಣವೊಂದೇ ತಾರಕ ಮಂತ್ರ ಅಂತ ಶ್ರೀಗಳು ಅರಿತರು. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಅವಕಾಶ ಒದಗಿಸಿದರು. ಇದನ್ನೂ ಓದಿ: ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!
ಜೋಳಿಗೆ ಹಿಡಿದು ಬಿಕ್ಷಾಟನೆಗೆ ಹೋಗುತ್ತಿದ್ದ ಶ್ರೀಗಳು ಗ್ರಾಮಾಂತರ ಭಾಗದಲ್ಲಿ ಶಾಲೆಗೆ ಹೋಗಬೇಕಾಗಿದ್ದ ಪುಟಾಣಿ ಮಕ್ಕಳು ಕೂಲಿಗೆ ಹೋಗುತ್ತಿದ್ದ ದೃಶ್ಯ ಶ್ರೀಗಳನ್ನು ಬಹುವಾಗಿ ಕಾಡಿತ್ತು. ಅಲ್ಲಿಂದಲೇ ಶಿಕ್ಷಣ ಕ್ರಾಂತಿಯ ಮಂತ್ರ ಪಠಿಸಿಯೇ ಬಿಟ್ಟರು. ಭಿಕ್ಷಾ ಜೋಳಿಗೆಯ ಬಲದಿಂದಲೇ ಶಾಲೆ ಆರಂಭಿಸಿ ಅನಾಥಲಾಯದ ಸೇವೆ ವಿಸ್ತರಿಸಿದ್ರು.
ಶ್ರೀಮಠದ ಎಲ್ಲಾ ಶಾಲಾ ಕಾಲೇಜುಗಳಿಗೆ ಪೂಜ್ಯರೇ ಅಧ್ಯಕ್ಷರಾಗಿ ಶಿಕ್ಷಣ ಕ್ರಾಂತಿಯನ್ನು ಪಸರಿಸುವ ಕಾರ್ಯವನ್ನು ಅವಿರತವಾಗಿ ಶುರುಮಾಡಿದರು. ಈ ಶಾಲೆಗೆ ಸೇರಲು ಬಡತನವೊಂದೆ ಸರ್ಟಿಫಿಕೇಟ್. ಎಲ್ಲ ಜಾತಿ ಧರ್ಮಗಳನ್ನು ಮೀರಿದ ಶಿಕ್ಷಣ ಇಲ್ಲಿ ಲಭ್ಯ.
ಹಿರಿಯ ಸಾಹಿತಿ ಗೊ.ರು ಚೆನ್ನಬಸಪ್ಪ ಹೇಳಿದಂತೆ ಒಂದು ಬಾರಿ ಮಠದ ಅವರಣದಲ್ಲಿ ಪುಟಾಣಿ ಬಡ ಮುಸ್ಲಿಂ ಬಾಲಕನೊಬ್ಬ ವಿದ್ಯಾಭ್ಯಾಸ ಕಲಿಯಲು ಶ್ರೀಗಳ ಅನುಮತಿಗಾಗಿ ಕಾಯುತ್ತ ನಿಂತಿದ್ದಾನಂತೆ. ಆತನ ಪೋಷಕರಿಗೆ ಒಳಗೊಳಗೆ ಭಯ. ಅಯ್ಯೋ ಶ್ರೀಗಳು ನಮ್ಮನ್ನೆಲ್ಲ ಭೇಟಿಯಾಗ್ತಾರಾ? ಯಾರ ರಾಜಕೀಯ ನಾಯಕರ ದೊಡ್ಡವರ ರೆಫರೆನ್ಸ್ ಇಲ್ಲದೇ ಶ್ರೀಗಳನ್ನು ಭೇಟಿಯಾಗೋದಾದ್ರೂ ಹೇಗೆ ಅಂತಾ ಭಯ ಪಡುತ್ತಿದ್ದರಂತೆ. ಆಗಲೇ ಅಲ್ಲೊಬ್ಬ ಪುಟಾಣಿ ಮಠದ ವಿದ್ಯಾರ್ಥಿ ಸಿಕ್ಕಾಗ ಶ್ರೀಗಳು ಭೇಟಿ ಮಾಡೋದಾದ್ರೇ ಯಾರಿಂದ ಶಿಪಾರಸ್ಸು ಮಾಡಬೇಕು ಏನಾದ್ರೂ ಗೊತ್ತಿದ್ಯಾ? ನೀವೆಲ್ಲ ಹೇಗೆ ಬಂದ್ರಿ ಇಲ್ಲಗೆ ಅಂದ್ರಂತೆ. ಇಲ್ಲಿ ವಿದ್ಯಾಭ್ಯಾಸಕ್ಕೆ ಬಡತನ, ಕಲಿಯುವ ಹಪಾಹಪಿಯೊಂದೆ ಸರ್ಟಿಫಿಕೇಟು ಶ್ರೀಗಳು ಎಲ್ಲಾ ಭಕ್ತರನ್ನು ಭೇಟಿಯಾಗ್ತಾರೆ. ಅವರ ಭೇಟಿಗೆ ಬೇರೆಯವರ ಶಿಫಾರಸು ಯಾಕೆ ಅಂತಾ ಚೋಟುದ್ಧ ಬಾಲಕ ಹೇಳಿ ಹೋದನಂತೆ.
ಥೇಟು ಬಾಲಕ ಹೇಳಿದಂತೆ ದೈವಸ್ವರೂಪಿ ಶ್ರೀಗಳು ಈ ಬಡ ಮುಸ್ಲಿಂ ಬಾಲಕನ ಪೋಷಕರನ್ನು ಭೇಟಿಯಾಗಿ ಸುಮಾರು ಅರ್ಧಗಂಟೆ ಮಾತಾನಾಡಿ ಶಾಲೆಗೆ ಸೇರಿಸಿಕೊಂಡರಂತೆ. ಹೀಗೆ ಬಡಮಕ್ಕಳಿಗೆ , ಗ್ರಾಮೀಣ ಭಾಗದ ಮಕ್ಕಳಿಗಷ್ಟೇ ಇಲ್ಲಿ ಮೊದಲ ಆದ್ಯತೆಯನ್ನು ಗುರುಗಳು ಕೊಡುತ್ತಿದ್ದರು. ಇದನ್ನೂ ಓದಿ: ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!
ಸಿದ್ದಗಂಗಾ ಕ್ಷೇತ್ರ ಕನ್ನಡ ನಾಡಿನ ಬೃಹತ್ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿದೆ. ಬೇಸಗೆಯ ರಜೆಯ ನಂತರ ಶಾಲೆಗಳ ಪುನಾರಾರಂಭದಲ್ಲಿ ಸಿದ್ದಗಂಗಾ ಕ್ಷೇತ್ರವನ್ನು ನೋಡಬೇಕು. ಸಿದ್ದಗಂಗಾ ಸುತ್ತಮುತ್ತಿನ ಅಷ್ಟೇ ಅಲ್ಲದೇ ದೂರದ ಬೀದರ್ ಬೆಳಗಾವಿ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಬಡಮಕ್ಕಳು ತಮ್ಮ ತಂದೆ ತಾಯಿಗಳೊಡನೆ ತಲೆಯ ಮೇಲೆ ಪುಟ್ಟ ಪೆಟ್ಟಿಗೆ ಹೊತ್ತು ಬರುವ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿ. ಸಿದ್ದಗಂಗಾ ಮಠಕ್ಕೆ ತಮ್ಮ ಮಕ್ಕಳು ಸೇರಿದವರೆಂದರೆ ಹೆತ್ತವರಿಗೆ ಆ ಮಕ್ಕಳನ್ನು ತಾಯಿ ಮಡಿಲಲ್ಲಿ ಇಟ್ಟಷ್ಟು ನೆಮ್ಮದಿ.
ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯ, ಆಡಳಿತ ಮಹಾವಿದ್ಯಾಲಯ, ಶಿಕ್ಷಣ ಮಹಾವಿದ್ಯಾಲಯ, ಶಿಕ್ಷಕರ ತರಬೇತಿ ಕೇಂದ್ರ, ಪಾಲಿಟೆಕ್ನಿಕ್ ಕೇಂದ್ರ, ನರ್ಸಿಂಗ್ ಕಾಲೇಜ್, ಕೈಗಾರಿಕಾ ತರಬೇತಿ ಕೇಂದ್ರ, ಅಂಧ ಮಕ್ಕಳ ಶಾಲೆ, ಸಂಸ್ಕೃತ ಪಾಠಶಾಲೆ ಫಾರ್ಮಸಿ ಕಾಲೇಜು ಹೀಗೆ ಶ್ರೀಮಠದ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಒಟ್ಟು 125 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ.
ಶಿಕ್ಷಕರ ತರಬೇತಿ ಕೇಂದ್ರವಿರಲಿ, ಗ್ರಂಥ ಭಂಡಾರವಿರಲಿ, ಪಾಠ ಶಾಲೆಯಿರಲಿ, ಆಟದ ಮೈದಾನವಿರಲಿ, ಎಲ್ಲರೂ ಕೂಡಿ ಬದುಕುವ ಕಮ್ಮಟವಾಗಿದೆ ಸಿದ್ದಗಂಗಾ ಕ್ಷೇತ್ರ.
https://www.youtube.com/watch?v=FbJf6G0kt3E
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv