ಮಡಿಕೇರಿ: ರಾಜ್ಯದ ರಣಜಿ ತಂಡದ ಮಾಜಿ ಆಟಗಾರ ಹಾಗೂ ಬಿಗ್ ಬಾಸ್ 3 ಸೀಸನ್ ಸ್ಪರ್ಧಿಯಾಗಿ ಪ್ರಸಿದ್ಧಿ ಪಡೆದಿರುವ ಎನ್.ಸಿ ಅಯ್ಯಪ್ಪ ಹಾಗೂ ಸ್ಯಾಂಡಲ್‍ವುಡ್ ನಟಿ ಅನು ಪೂವಮ್ಮ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಎನ್.ಸಿ ಅಯ್ಯಪ್ಪ ಹಾಗೂ ನಟಿ ಅನು ಪೂವಮ್ಮ ಅವರ ಮದುವೆ ಇಂದು ಕೊಡಗಿನ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯುತ್ತಿದೆ. ಕೊಡವ ಸಂಪ್ರದಾಯದಂತೆ ಮದುವೆ ನಡೆದಿದೆ. ಖ್ಯಾತ ಚಿತ್ರನಟಿ ಪ್ರೇಮಾ ಅವರ ಸಹೋದರ ಅಯ್ಯಪ್ಪರ ಮದುವೆ ಸಮಾರಂಭದಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದಾರೆ.
ಶನಿವಾರ ರಾತ್ರಿ ಆರತಕ್ಷತೆ ನಡೆದಿದ್ದು, ನಟಿ ಪ್ರೇಮಾ ಅವರು ಕೊಡಗಿನ ಸಂಗೀತಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಚಿತ್ರರಂಗದ ಗಣ್ಯರು ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವರ ಎನ್.ಸಿ ಅಯ್ಯಪ್ಪ ಹಾಗೂ ವಧು ನಟಿ ಅನು ಪೂವಮ್ಮ ಅವರು ಕೊಡಗಿನ ಉಡುಗೆಯನ್ನು ತೊಟ್ಟು ಮಿಂಚಿದ್ದು, ಸಂಬಂಧಿಕರು, ಗಣ್ಯರು ನೂತನ ವಧು-ವರರಿಗೆ ಶುಭಕೋರುತ್ತಿದ್ದಾರೆ.
2018ರ ಮೇ ತಿಂಗಳಿನಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಸಂಪ್ರದಾಯದಂತೆ ಇವರಿಬ್ಬರ ನಿಶ್ಚಿತಾರ್ಥವಾಗಿತ್ತು. 2016ರಲ್ಲಿ ಅಯ್ಯಪ್ಪ ಮತ್ತು ಅನು ಇಬ್ಬರು ಭೇಟಿಯಾಗಿದ್ದು, ಪರಿಚಯವಾಗಿ ಸ್ನೇಹವಾಗಿತ್ತು. ಬಳಿಕ ಸ್ನೇಹ ಪ್ರೀತಿಯಾಗಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದರು.
ಎರಡು ಕುಟುಂಬದವರು ಕೂಡ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು. ಅನು ಪೂವಮ್ಮ ಕನ್ನಡದ ಕರ್ವ, ಕಥಾವಿಚಿತ್ರ, ಲೈಫ್ ಸೂಪರ್, ಪಾನಿಪೂರಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈಗ ಅವರು ಖಾಸಗಿ ವಾಹಿನಿಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv